ಜಿಲ್ಲೆ

ಮುಂದೆ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ

ಮದ್ದೂರು ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಕೆರೆಗೆ ಶ್ರೀಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿಸಿ ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಬಾಗಿನ ಅರ್ಪಿಸಿದರು. ತೈಲೂರು ವೆಂಕಟಕೃಷ್ಣ, ಎಂ.ಪಿ.ಲಿಂಗೇಗೌಡ, ಎಂ.ಮಹೇಶ್, ನಿಡಘಟ್ಟ ಪ್ರಕಾಶ್, ಲಕ್ಷ್ಮೀ ಇದ್ದರು.

ಮದ್ದೂರು: ಕೆರೆ, ಕಟ್ಟೆಗಳು, ನದಿ, ಹೊಳೆ, ತೊರೆ ಸೇರಿದಂತೆ ಜಲ ಮೂಲಗಳನ್ನು ರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹನಿ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಕಳವಳ ವ್ಯಕ್ತಪಡಿಸಿದರು.


ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿ.ಸಿ. ಟ್ರಸ್ಟ್, ನಿಡಘಟ್ಟ ಪ್ರಗತಿ ಬಂಧು ಸ್ವ-ಸಹಾಯ ಒಕ್ಕೂಟ ಮಾದನಾಯಕನಹಳ್ಳಿ ಹಾಗೂ ಕೆರೆ ಸಮಿತಿ ಮಾದನಾಯನಹಳ್ಳಿ 216ನೇ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಹಾಗೂ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಆಧುನಿಕತೆಯ ಹೆಸರಿನಲ್ಲಿ ಪ್ರಸ್ತುತ ದಿನಗಳಲ್ಲಿ ಜಲ ಮೂಲಗಳಾದ ಕೆರೆ-ಕಟ್ಟೆ, ನದಿ, ಕಾಲುವೆ, ಹಳ್ಳ-ತೊರೆ ಇವುಗಳನ್ನು ಮುಚ್ಚಿ ಭವ್ಯ ಬಂಗಲೆಗಳನ್ನು ಹಾಗೂ ಕಾರ್ಖಾನೆಗಳನ್ನು ನಿರ್ಮಾಣ ಮಾಡುವ ಮೂಲಕ ಜಲ ಮೂಲಗಳನ್ನು ನಾಶ ಮಾಡುತ್ತಿರುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ, ಆರೋಗ್ಯದ ಮೇಲೂ ಹಲವು ರೀತಿಯ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅವರು ಬಾಗಿನ ಅರ್ಪಿಸಿ ಮಾತನಾಡಿ, ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 452 ಕೆರೆಗಳನ್ನು 36 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಹೂಳೆತ್ತುವುದು ಮತ್ತು ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿರುವುದರಿಂದ ಆ ಭಾಗಗಳಲ್ಲಿ ಅಂತರ್ಜಲ ವೃದ್ಧಿಯಾಗಿ ನೀರಿನ ಬವಣೆ ಕಡಿಮೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೇಶ್ ಕನ್ಯಾಡಿ ಮಾತನಾಡಿ, ಗಿಡಗಂಟಿಗಳಿಂದ ತುಂಬಿದ್ದ ಕೆರೆಯನ್ನು ಗ್ರಾಮಸ್ಥರ ಹಾಗೂ ಪಂಚಾಯಿತಿ ಸಹಕಾರದಿಂದ ಹೊಳೆತ್ತುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ ಪರಿಣಾಮ ಹಾಗೂ ಇತ್ತೀಚೆಗೆ ಉತ್ತಮ ಮಳೆ ಬಂದ ಕಾರಣ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ಪಿ.ಲಿಂಗೇಗೌಡ ಮಾತನಾಡಿ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ 9 ಲಕ್ಷ ರೂ. ನೀಡಿದ್ದಾರೆ. ಜತೆಗೆ ಗ್ರಾಮಸ್ಥರ ಸಹಕಾರದಿಂದ ಕೆರೆಯನ್ನು ಸಮಗ್ರ ಅಭಿವೃದ್ಧಿ ಮಾಡಲಾಗಿದೆ ಎಂದರು.


ಗ್ರಾಪಂ ಅಧ್ಯಕ್ಷ ಎಂ ಮಹೇಶ್, ಮಾಜಿ ಅಧ್ಯಕ್ಷ ಪ್ರಕಾಶ್, ಟ್ರಾಫಿಕ್ ಎಸ್‌ಐ ಅಯ್ಯನಗೌಡ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮಂಡ್ಯ ಜಿಲ್ಲಾ ನಿರ್ದೇಶಕ ಎಂ.ಚೇತನ, ಪಿಡಿಒ ಲಕ್ಷ್ಮೀ, ನ್ಯೂಸ್ ಪ್ಲಸ್ ಚಾಲನ್‌ನ ಯು.ಬಿ.ಚಂದ್ರಶೇಖರ್ ಸೇರಿದಂತೆ ಇತರರಿದ್ದರು.