ವಿಜಯವಾಣಿ ವಿಶೇಷ ಮೈಸೂರು
ಈ ಬಾರಿಯ ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಂಕಷ್ಟ ಉಂಟಾಗಲಿದೆ ಎನ್ನುವ ಆತಂಕ ಮನೆ ಮಾಡಿದೆ.
ಕಾವೇರಿ, ಕಪಿಲಾ ನದಿ ಮೂಲವನ್ನೇ ನೆಚ್ಚಿಕೊಂಡಿರುವ ಮೈಸೂರು ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಲಕ್ಷಾಮ ತಲೆದೋರಲಿದೆಯೇ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಆತಂಕ ಉಂಟಾಗುತ್ತಿತ್ತು. ಆದರೆ ಈಗ ಮಳೆಗಾಲ ಆರಂಭದಲ್ಲಿಯೇ ಜೀವಜಲಕ್ಕೆ ಸಂಕಷ್ಟ ಶುರುವಾಗಿರುವುದು ಮುನ್ನೆಚ್ಚರಿಕೆ ಕೈಗೊಳ್ಳಲು ಎಚ್ಚರಿಕೆಯ ಗಂಟೆಯಾಗಿದೆ.
ಕೆ.ಆರ್.ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ಈಗ ಲಭ್ಯ ಇರುವ ನೀರು ಆಗಸ್ಟ್ ಮಧ್ಯ ಭಾಗದವರೆಗೆ ಮಾತ್ರ ಸಾಕಾಗುತ್ತದೆ ಎನ್ನಲಾಗುತ್ತಿದೆ. ಆ ವೇಳೆಗೆ ಮಳೆಯಾಗಿ ಜಲಾಶಯಗಳು ಭರ್ತಿಯಾದರೆ ಜನರು ಹಾಗೂ ಸರ್ಕಾರ ನಿಟ್ಟುಸಿರು ಬಿಡಲಿದೆ. ಇಲ್ಲವಾದರೆ ಜಲಕ್ಷಾಮದಿಂದ ತೀವ್ರ ಸಂಕಷ್ಟ ಎದುರಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ನೀರನ್ನು ಮಿತವಾಗಿ ಬಳಸುವಂತೆ ನಗರಪಾಲಿಕೆಯಿಂದ ಜನಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಅಲ್ಲದೆ, ನಿತ್ಯ ನೀರು ಬರುತ್ತಿದ್ದ ಬಡಾವಣೆಗಳಲ್ಲಿ ಈಗ 2-3 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.
ಮೈಸೂರು ನಗರಕ್ಕೆ ಕಾವೇರಿ ನದಿ ಪಾತ್ರದ ಮೂರು ಘಟಕಗಳಾದ ಮೇಳಾಪುರ, ಹೊಂಗಳ್ಳಿ ಮತ್ತು ಬೆಳಗೊಳ ಘಟಕದಿಂದ ಮತ್ತು ಕಬಿನಿಯಿಂದ ನಿತ್ಯ 315 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಕಬಿನಿ ಪಾತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ, ಕಾವೇರಿ ನೀರು ಪೂರೈಕೆಯೇ ಸಮಸ್ಯೆಯಾಗುತ್ತಿದೆ.
ಈಗಾಗಲೇ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಬುಧವಾರ 78.22 ಅಡಿ ಇದ್ದು, ಇನ್ನೂ 8 ಅಡಿ ವರೆಗೆ ಮಾತ್ರ ಡೆಡ್ ಸ್ಟೋರೇಜ್‌ನಿಂದ ನೀರು ಪಡೆಯಲು ಸಾಧ್ಯವಾಗಲಿದೆ. ಜಲಾಶಯ 70 ಅಡಿಗೆ ಕುಸಿಯುತ್ತಿದ್ದಂತೆ ಹೊಂಗಳ್ಳಿ ಘಟಕದಿಂದ ಬರುವ 115 ಎಎಂಎಲ್‌ಡಿ ನೀರು ಪೂರೈಕೆ ಸಂಪೂರ್ಣ ಸ್ಥಗಿತವಾಗಲಿದೆ. ಇದು ಪಾಲಿಕೆ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.
ಇದರಿಂದ ನಗರಕ್ಕೆ ಬರುವ ನೀರು ಗಣನೀಯ ಪ್ರಮಾಣದಲ್ಲಿ ಕುಸಿತವಾಗಲಿದ್ದು, ಕೇವಲ 210 ಎಂಎಲ್‌ಡಿ ಮಾತ್ರ ಪೂರೈಕೆಯಾಗಲಿದೆ. ನೀರು ಪೂರೈಕೆಯ ಈ ಸಂದಿಗ್ಧ ಸಮಸ್ಯೆಯನ್ನು ನಿಭಾಯಿಸಲು ಪಾಲಿಕೆ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳು, ನದಿ ಪಾತ್ರದಲ್ಲಿಯೇ 350 ಎಚ್‌ಪಿ ಎರಡು ಪಂಪ್‌ಸೆಟ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಡೆಡ್ ಸ್ಟೋರೇಜ್‌ನಿಂದ ನೀರು ಪೂರೈಕೆ ಸ್ಥಗಿತವಾಗುತ್ತಿದ್ದಂತೆ ಪಂಪ್‌ಸೆಟ್‌ನಿಂದ ನದಿ ಪಾತ್ರದಲ್ಲಿಯೇ ನೀರನ್ನು ಪಂಪ್ ಮಾಡಿ ನಗರಕ್ಕೆ ಪೂರೈಕೆ ಮಾಡಿದರೂ ಸಿಗುವುದು ನಿತ್ಯ 55 ಎಂಎಲ್‌ಡಿ ಮಾತ್ರ. ಉಳಿಕೆ ಕೊರತೆಯಾಗಲಿರುವ ನೀರಿನ ಪ್ರಮಾಣವನ್ನು ಡೆಡ್ ಸ್ಟೋರೇಜ್‌ನಿಂದಲೇ ಪಡೆಯುವ ಪ್ರಯತ್ನವನ್ನು ಮಾಡಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಅದು ಕೂಡ 10 ದಿನಗಳಿಗೆ ಮಾತ್ರ ಸಿಗಲಿದ್ದು, ನಂತರ ಡೆಡ್ ಸ್ಟೋರೇಜ್ ನೀರು ಸಹ ಸಿಗುವುದಿಲ್ಲ. ಇದರಿಂದ ಬರುವ ನೀರಿನ ಪ್ರಮಾಣದಲ್ಲಿ ಬರೋಬ್ಬರಿ 50 ಎಂಎಲ್‌ಡಿವರೆಗೆ ವ್ಯತ್ಯಯವಾಗಲಿದ್ದು, ವ್ಯವಸ್ಥಿತವಾಗಿ ನೀರು ಪೂರೈಕೆಯೇ ಸವಾಲಾಗಲಿದೆ.
ಕೇರಳದ ವೈನಾಡು ಪ್ರದೇಶದಲ್ಲಿ ಮಳೆ ಅಗುತ್ತಿರುವುದರಿಂದ ಕಬಿನಿ ಜಲಾಶಯದ ಮಟ್ಟ ಏರಿಕೆ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. 2,284 ಅಡಿ ಇರುವ ಜಲಾಶಯದಲ್ಲಿ ಈಗ 1,174 ಅಡಿ ಒಳ ಹರಿವು ಇದ್ದು, 2,252.26 ಅಡಿ ನೀರು ಸಂಗ್ರಹವಾಗಿದೆ. ಹೀಗಾಗಿ ಮೈಸೂರು ನಗರಕ್ಕೆ ಇನ್ನು ಕೆಲವು ದಿನ ನೀರಿನ ಸಂಕಷ್ಟ ದೂರವಾಗಲಿದೆ ಎನ್ನುವ ವಿಶ್ವಾಸ ಮೂಡಿಸಿದೆ.
ಪಾಲಿಕೆಯಿಂದ ಸಿದ್ಧತೆ
ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದೆ ಇರುವುದರಿಂದ ಕುಡಿಯುವ ನೀರಿನ ತೊಂದರೆಯಾದರೆ ಅಗತ್ಯ ಕ್ರಮಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೆಳಗೊಳ, ಹೊಂಗಳ್ಳಿಯಲ್ಲಿ ಲಭ್ಯ ಇರುವ ನೀರನ್ನು ಸಂಗ್ರಹಿಸಿದ ಬಳಿಕ ನದಿ ಮೂಲದಿಂದಲೇ ನೀರು ಎತ್ತುವ ಕುರಿತು ಮುಂದೆ ಆಲೋಚಿಸಲಾಗುವುದು. ಸಂಕಷ್ಟದ ಕಾಲದಲ್ಲಿ ಜನರು ನೀರನ್ನು ಮಿತವಾಗಿ ಬಳಸಿ ಸಹಕರಿಸಬೇಕಿದೆ.
ಲಕ್ಷ್ಮೀಕಾಂತರೆಡ್ಡಿ
ಆಯುಕ್ತ ನಗರಪಾಲಿಕೆ