ಜಿಲ್ಲೆ

ಮುಂದುವರಿದ ಸೇವಾ ಭಾರತಿ ವಿದ್ಯಾರ್ಥಿಗಳ ಪ್ರತಿಭಟನೆ

ಚಾಮರಾಜನಗರ: ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಕಾಲೇಜು ಪ್ರಾರಂಭಕ್ಕೂ ನೀಡಿದ್ದ ಭರವಸೆಯಂತೆ ಶಾರದಾ ಅಕಾಡೆಮಿ ವತಿಯಿಂದಲೇ ತರಬೇತಿ ಕೊಡಿಸಬೇಕು ಎಂದು ಆಗ್ರಹಿಸಿ ಸೇವಾ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿ ಮತ್ತು ಪಾಲಕರ ಪ್ರತಿಭಟನೆ ಸೋಮವಾರವೂ ಮುಂದುವರಿಯಿತು.

ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಮುಂಭಾಗ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರು ಬೆಳಗ್ಗೆಯೇ ಜಮಾಯಿಸಿದ್ದರು. ಈ ವೇಳೆ ಯಾರನ್ನು ಕಾಲೇಜು ಒಳಗಡೆ ಬಿಡದೆ, ಮಧ್ಯಾಹ್ನ 3.30 ಗಂಟೆಗೆ ಪಾಲಕರ ಸಭೆ ಕರೆಯಲಾಗಿದೆ ಎಂದು ನೋಟೀಸ್ ಅಂಟಿಸಿದರು. ಇದನ್ನು ನೋಡಿದ ಪಾಲಕರು ಅಕ್ರೋಶಗೊಂಡು ನೀವು ಸೋಮವಾರ ಬೆಳಗ್ಗೆ ಸಭೆ ಕರೆಯಲಾಗಿದೆ ಎಂದು ಹೇಳಿದ್ದೀರಿ. ಆದರೆ ಈಗ ಸಮಯ ಬದಲಾಯಿಸಿದರೇ ನಾವು ಏನು ಮಾಡಬೇಕು ಎಂದು ಆಡಳಿತ ಮಂಡಳಿ ವಿರುದ್ಧ ಬೇಸರ ಹೊರಹಾಕಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪಾಲಕರು ಗಲಾಟೆ ಮಾಡದಂತೆ ತಿಳಿಸಿದರು. ಬಳಿಕ ಪ್ರತಿಭಟನಾನಿರತರು ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು.

ಸೇವಾ ಭಾರತಿ ಶಿಕ್ಷಣ ಸಂಸ್ಥೆ ಹಾಗೂ ಶಾರದಾ ಅಕಾಡೆಮಿಯವರು ಉತ್ತಮ ಶಿಕ್ಷಣ ಕೊಡಿಸುತ್ತೇವೆ ಎಂದು ಪಾಲಕರಿಗೆ ಭರವಸೆ ನೀಡಿದ್ದು, ಹೆಚ್ಚುವರಿ ಶುಲ್ಕ ಸಂಗ್ರಹಿಸಿದ್ದಾರೆ. ಆದರೆ, ಕಳೆದ ಒಂದು ವಾರದಿಂದಲೂ ಯಾವುದೇ ತರಗತಿಗಳು ನಡೆಯುತ್ತಿಲ್ಲ. ಈ ಸಂಬಂಧ ಸೇವಾ ಭಾರತಿ ಸಂಸ್ಥೆಯವರನ್ನು ವಿಚಾರಿಸಿದಾಗ ಶಾರದಾ ಅಕಾಡೆಮಿ ಸಂಸ್ಥೆಯೇ ಇಲ್ಲ ಎಂದು ತಿಳಿಸಿರುತ್ತಾರೆ.

ಈ ಸಂಬಂಧ ವಿಚಾರಿಸಿದಾಗ ನಮ್ಮ ಸಂಸ್ಥೆಯಿಂದಲೇ ಉತ್ತಮ ಶಿಕ್ಷಣ ಕೊಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಇವರ ಮೇಲೆ ನಮಗೆ ನಂಬಿಕೆ ಇಲ್ಲ. ಕಳೆದ ಬಾರಿ 37 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶಾರದಾ ಅಕಾಡೆಮಿಯ ಅಧ್ಯಕ್ಷ ಸತೀಶ್ ಅವರ ನೇತೃತ್ವದಲ್ಲಿ ಶಿಕ್ಷಣ ಕೊಡಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲಕರಾದ ಗೋಪಿ, ಸತೀಶ್, ಶ್ರೀನಿವಾಸ, ಸುರೇಶ್, ರಾಜೇಂದ್ರ, ಸುಬ್ರಹ್ಮಣ್ಯ, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.