ಜಿಲ್ಲೆ

ಮುಂದುವರಿದ ಪೌರನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಚಾಮರಾಜನಗರ: ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಯೋಜನೆಯಾದ ಜ್ಯೋತಿ ಸಂಜೀವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಪೌರನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರವೂ ಮುಂದುವರಿಯಿತು.

ನಗರಸಭೆ ಮುಂಭಾಗ ಪೌರ ನೌಕರರು ನಾಲ್ಕೂ ದಿನಗಳಿಂದಲೂ ನಡೆಸುತ್ತಿರುವ ಪ್ರತಿಭಟನೆಗೆ ಸಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಬೆಂಬಲ ನೀಡಿದರು. ಈ ಸಂದರ್ಭದಲ್ಲಿ

ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪೌರ ನೌಕರರು ಮುಷ್ಕರ ನಡೆಸುತ್ತಿದ್ದು. ನಗರಸಭಾ ಸದಸ್ಯರು ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಪೌರ ನೌಕರರ ಮುಷ್ಕರದಿಂದ ನಗರದಲ್ಲಿ ಸ್ವಚ್ಚತೆ ಆಗುತ್ತಿಲ್ಲ. ಸರ್ಕಾರ ಕೂಡಲೇ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಮಾಜಿ ಅಧ್ಯಕ್ಷೆ ಆಶಾನಟರಾಜು, ಸದಸ್ಯರಾದ ಅಬ್ರಾರ್ ಅಹಮದ್, ಶಿವರಾಜ್, ಎಂ.ಮಹೇಶ್, ಗಾಯಿತ್ರಿ ಚಂದ್ರಶೇಖರ್, ಕಲೀಲ್ ಉಲ್ಲಾ, ಚಂದ್ರಶೇಖರ್, ಲೋಕೇಶ್ವರಿ, ಕುಮುದಾ ಕೇಶವಮೂರ್ತಿ, ಗೌರಿ, ನಾಗೇಂದ್ರಬಾಬು, ವೆಂಕಟನಾಯಕ, ಮಂಜುನಾಥ್, ಜಯನಾಯಕ್, ಶಿವಶಂಕರ್ ಆರಾಧ್ಯ, ಸುಷ್ಮಾ, ಪುಷ್ಪ, ಮಂಗಳಗೌರಿ, ನಾಗರಾಜು, ನಿತಿನ್ ಹಾಗೂ ಇತರರು ಭಾಗವಹಿಸಿದ್ದರು.

ಕಸವಿಲೇವಾರಿಯಾಗದೇ ಕಿರಿಕಿರಿ:

ನಗರಸಭೆ ಪೌರನೌಕರರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಹೋರಾಟದಿಂದ ಕಸವಿಲೇವಾರಿಯಾಗದೇ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ನಗರದ ಪ್ರಮುಖ ಬಡಾವಣೆಗಳ ರಸ್ತೆಬದಿಯಲ್ಲಿ ರಾಶಿಗಟ್ಟಲೇ ಕಸ ಬಿದ್ದಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆತು ನಾರುತ್ತಿದೆ. ಕೆಲವು ಕಡೆಗಳಲ್ಲಿ ಕಸದ ರಾಶಿ ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೇ ನಗರದ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು ಹಾಗೂ ಇನ್ನಿತರೆ ಕಡೆಗಳಲ್ಲಿ ಕಸವಿಲೇವಾರಿ ಮಾಡಲಾಗುತ್ತಿದ್ದು, ಈ ಸಂಬಂಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.