ಕಲಬುರಗಿ: ದೇಶದಲ್ಲೇ ಮೊದಲ ಬಲಿ ಪಡೆದಿರುವ ಜಿಲ್ಲೆಯಲ್ಲಿ ಕರೊನಾ ತಡೆಗಟ್ಟಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇನ್ನಿಲ್ಲದ ಪ್ರಯತ್ನನಡೆಸುತ್ತಿವೆ. ಬರುವ ಭಯಾನಕ ದಿನಗಳ ಬಗ್ಗೆ ಎಚ್ಚರಿಕೆ ನೀಡಿ ಸಹಕಾರ ಕೋರುತ್ತಿದ್ದರೂ ನಾಗರಿಕರ ಅಸಡ್ಡೆ ಮುಂದುವರಿದಿದೆ. ಪರಿಣಾಮ ಸೋಮವಾರ ನಗರದಲ್ಲಿ ವಾಹನ ಮತ್ತು ಜನಸಂಚಾರ ಹೆಚ್ಚಿಗೆ ಕಂಡಿತು.
ಭಾನುವಾರ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪೆಟ್ರೋಲ್, ಡೀಸೆಲ್ ವಿತರಣೆಗೆ ನಿರ್ಬಂಧ ವಿಧಿಸುವಂತೆ ಅಧಿಕಾರಿಗಳ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಪಾಲನೆಯಾಗುತ್ತಿಲ್ಲ. ಅಗತ್ಯ ಸೇವೆ ಸಲ್ಲಿಸುವವರ ವಾಹನಗಳಿಗೆ ಮಾತ್ರ ಇಂಧನ ತುಂಬುವಂತೆ ಹೇಳಿದ್ದಾರೆ. ಆದರೆ ಇಂಧನ ಲಭ್ಯತೆ ನೋಡಿ ಉಳಿದವರಿಗೂ ನೀಡಲು ಅವಕಾಶ ಇದ್ದುದ್ದರಿಂದ ಜನರು ನಿರುಮ್ಮಳವಾಗಿ ತಮ್ಮ ವಾಹನಗಳಲ್ಲಿ ಪೆಟ್ರೋಲ್ ತುಂಬಿಕೊಂಡು ಓಡಾಡಿಕೊಂಡಿದ್ದಾರೆ.
ಲಾಕ್ಡೌನ್ ಆರಂಭದಿಂದ ಗಮನಿಸಿದರೆ ಸೋಮವಾರ ಜನ ಮತ್ತು ವಾಹನ ಸಂಚಾರ ಹೆಚ್ಚಾಗಿತ್ತು. ಆಟೋಗಳು ಸಹ ರಸ್ತೆಗಿಳಿದಿದ್ದು ಕಂಡಿತು. ನಗರ ಪೊಲೀಸ್ ಆಯುಕ್ತ, ಡಿಸಿಪಿ, ಆರು ಎಸಿಪಿಗಳಂಥ ಹಿರಿಯ ಅಧಿಕಾರಿಗಳಿದ್ದರೂ ಅನಗತ್ಯವಾಗಿ ವಾಹನ ಮತ್ತು ಬೈಕ್ಗಳ ಓಡಾಟಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ. ಇನ್ನು ಕೆಳಹಂತದ ಪೊಲೀಸ್ ಸಿಬ್ಬಂದಿ ವಾರದಿಂದ ಹೈರಾಣ ಆಗಿ ಕೆಲಸ ಮಾಡಿದ್ದರೂ ಜನ ಮಾತ್ರ ತಮ್ಮ ಅಸಡ್ಡೆ ಮುಂದುವರಿಸಿರುವುದು ಆತಂಕ ಸೃಷ್ಟಿಸಿದೆ.
ನಗರದ ಜೇವರ್ಗಿ ರಸ್ತೆ, ರಾಮಮಂದಿರ ವೃತ್ತ, ಸೂಪರ್ ಮಾರ್ಕೆಟ್ , ತಾಜಸುಲ್ತಾನಪುರ ಮಾರ್ಕೆಟ್ ಜತೆಗೆ ಅಫಜಲಪುರ ಎಪಿಎಂಸಿ ಯಾರ್ಡನಲ್ಲಿ ಸೋಮವಾರ ಬೆಳಗ್ಗೆ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದರು. ಎಲ್ಲ ಕಡೆ ಗುಂಪಾಗಿರುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸ್ಪಷ್ಟವಾಗಿ ಕಂಡು ಬಂದಿತು. ಕೆಲವರು ಮಾತ್ರ ಮಾಸ್ಕ್ ಧರಿಸಿದ್ದರು.
ಸೋಂಕು ನಿರ್ನಾಮಕ್ಕೆ ಪಣ ತೊಟ್ಟು ಕೆಲಸ ಮಾಡುತ್ತಿರುವ ಅಧಿಕಾರಿಗಳು, ಪೊಲೀಸರು ಎಷ್ಟೇ ಕಟ್ಟೆಚ್ಚರ, ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ದಂಡ ವಸೂಲಿ ಮಾತ್ರವಲ್ಲ ವಾಹನ ವಶಕ್ಕೆ ತೆಗೆದುಕೊಂಡು ಸಂಬಂಧಿತ ಮಾಲೀಕರ ಚಾಲನಾ ಪರವಾನಗಿ ರದ್ದುಪಡಿಸುವ ಬೆದರಿಕೆ ಹಾಕಿದರೂ ಜನತೆ ಪರಿಸ್ಥಿತಿಯ ಗಂಭೀರತೆ ಅರಿತುಕೊಳ್ಳುತ್ತಿಲ್ಲ.
ಜಿಲ್ಲೆಯ ಬಹುತೇಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಚರಿಸುತ್ತ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ದಿನಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಡಲಾಗಿದೆ. ಆದರೂ ಜನ ಗಂಭೀರವಾಗಿಲ್ಲದಿರುವುದು ಚಿಂತೆಗೆ ಕಾರಣವಾಗಿದೆ.
ಬ್ಯಾಂಕ್ ಮುಂದೆ ಜನರ ಗುಂಪು
ಕಲಬುರಗಿ ನಗರದ ಬ್ಯಾಂಕ್ವೊಂದರ ಎದುರು ಹಣ ಪಡೆಯಲು ಸೋಮವಾರ ಜನ ಗುಂಪಾಗಿ ಸೇರಿದ್ದರು. ಟೋಕನ್ ಕೊಟ್ಟ ಅಧಿಕಾರಿಗಳು ಬ್ಯಾಂಕ್ ಹೊರಗಡೆ ಜನರನ್ನು ನಿಲ್ಲಿಸಿದ್ದರು. ಟೋಕನ್ ಪ್ರಕಾರ ಕರೆದು ಒಬ್ಬೊಬ್ಬರನ್ನು ಒಳಗೆ ಬಿಡುತ್ತಿದ್ದರು. ಆದರೆ ಹೊರಗಡೆ ಜನ ಗುಂಪಾಗಿರುವುದನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಿಸಲೇ ಇಲ್ಲ. ಬ್ಯಾಂಕ್ನೊಳಗೆ ಕಾಯ್ದುಕೊಂಡು ಬರುತ್ತಿದ್ದ ಅಂತರ ಹೊರಗೆ ಇರಲಿಲ್ಲ.
ಕ್ರಿಕೆಟ್ ಆಡುತ್ತಿದ್ದವರ ಬೈಕ್ ಜಪ್ತಿ
ಕಮಲಾಪುರ ತಾಲೂಕಿನ ಕಟ್ಟೊಳ್ಳಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕ್ರಿಕೆಟ್ ಆಡುತ್ತಿದ್ದವರ 2 ಬೈಕ್ಗಳನ್ನು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಜಪ್ತಿ ಮಾಡಿಕೊಂಡಿದ್ದಾರೆ. ಕಟ್ಟೊಳ್ಳಿ ಕ್ರಾಸ್ ಸಮೀಪದ ಕ್ರಷರ್ ಮಷಿನ್ ಹಿಂಭಾಗದಲ್ಲಿ ಮೂರು ದಿನದಿಂದ 30 ಯುವಕರು ಕ್ರಿಕೆಟ್ ಆಡುತ್ತಿದ್ದರು. ಆಟವಾಡಲು ಬೇಡ ಎನ್ನುತ್ತಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದರೂ ನಿಯಮ ಉಲ್ಲಂಘಿಸಿ ಆಟ ಮುಂದುವರಿಸಿದ್ದರಿಂದ ಸ್ಥಳಕ್ಕೆ ತಹಸೀಲ್ದಾರ್ ಆಗಮಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕಾಲ್ಕಿತ್ತಿದ್ದಾರೆ. ಈ ವೇಳೆ ಬಿಟ್ಟು ಹೋದ ಎರಡು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.