ಮೈಸೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಡೆಯುತ್ತಿರುವ ಧರಣಿ 7ನೇ ದಿನವಾದ ಭಾನುವಾರವೂ ಮುಂದುವರಿಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು, ಭಾನುವಾರ ಸರ್ಕಾರ ಹಾಗೂ ಮಂತ್ರಿಗಳನ್ನು ಅಣಕಿಸುವ ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು. ಕಬ್ಬು ಬೆಳೆಗಾರರು 7 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಲಿಲ್ಲ. ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಇದುವರೆಗೂ ರೈತರ ಕುಂದು ಕೊರತೆಗಳ ಸಭೆ ಕರೆದಿಲ್ಲ ಎಂದು ದೂರಿದರು.
ಜಿಲ್ಲೆಯಿಂದ ದೂರವಾದ ಮಂತ್ರಿ ಏತಕೆ, ರೈತರನ್ನು ಮರೆತೆ ಏತಕೆ , ಜನರಿಗೆ ಏನು ಮಾಡಿದೆ, ಇದು ನ್ಯಾಯವೇ ಎಂದು ಹಾಡಿನ ಮೂಲಕ ಸಚಿವ ಎಸ್.ಟಿ.ಸೋಮಶೇಖರ್ ನಡೆಯನ್ನು ಪ್ರತಿಭಟನಾಕಾರರು ಖಂಡಿಸಿದರು.
ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಾಲ್ಕು ತಿಂಗಳಿಂದ ಕಬ್ಬಿಗೆ ವೈಜ್ಞಾನಿಕ ದರ ನಿಗದಿಯಾಗದೆ ಅನ್ಯಾಯವಾಗಿದೆ ಎಂದು ಹೋರಾಟ ಮಾಡುತ್ತಿದ್ದರೂ ಇದರ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕರ ವೇತನ ಏರಿಕೆ ಮಾಡುವಾಗ ಯಾವುದೇ ಚರ್ಚೆ ಮಾಡದೆ ಏಕಾಏಕಿ ಏರಿಕೆ ಮಾಡಿಕೊಳ್ಳುತ್ತಾರೆ. ಆದರೆ ರೈತರು, ಜನಸಾಮಾನ್ಯರ ಬೇಡಿಕೆ ಈಡೇರಿಸುವಂತೆ ಕೋರಿದರೆ ಚರ್ಚಿಸಲಾಗುವುದು, ಪರಿಶೀಲಿಸಲಾಗುವುದು ಎನ್ನುವ ಹಾರಿಕೆ ಉತ್ತರ ನೀಡಲಾಗುತ್ತಿದೆ. ಕಬ್ಬಿನ ಬೆಲೆ ಏರಿಕೆ ಮಾಡುವಂತೆ 4 ತಿಂಗಳು ಹೋರಾಟ ನಡೆಸಿದರೂ ಪ್ರಯೋಜನಾಗಿಲ್ಲ. ಇಂತಹ ಜನಪ್ರತಿನಿಧಿಗಳನ್ನು ಶಾಸಕರು, ಮಂತ್ರಿಗಳು ಎಂದು ಕರೆಯಬೇಕಾ? ಇವರೆಲ್ಲ ಸಕ್ಕರೆ ಕಾರ್ಖಾನೆಯ ಕೈಗೊಂಬೆಗಳಾಗಿದ್ದಾರೆ. ಸಕ್ಕರೆ ಮಾಫಿಯಾ ದೇಶದಲ್ಲಿ ಬಹುದೊಡ್ಡ ಮಾಫಿಯಾ ಆಗಿದೆ. ಈ ಮಾಫಿಯಾ ಕಬ್ಬು ಬೆಳೆಗಾರರನ್ನು ನಾಶ ಮಾಡುತ್ತಿದೆ. ಜನಪ್ರತಿನಿಧಿಗಳು ಮಾಫಿಯಾ ಬಲೆಯಲ್ಲಿ ಬಿದ್ದಂತೆ ಕಾಣುತ್ತಿದೆ. ಇಂತಹ ಮಾಫಿಯಾ ಸರ್ಕಾರವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ದೂರಿದರು.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಚುಂಚರಾಯನಹುಂಡಿ ಮಂಜು, ಸಿದ್ದರಾಮು, ನಂಜುಂಡಸ್ವಾಮಿ, ಮಲ್ಲಪ್ಪ, ಮಹದೇವಸ್ವಾಮಿ, ಮಹದೇವಪ್ಪ, ಶಿವಮೂರ್ತಿ, ಕಾಳಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ಕೆಆರ್‌ಎಸ್ ರಾಮೇಗೌಡ, ಅಂಬಳೆ ಮಂಜುನಾಥ್ ಇತರರು ಇದ್ದರು.