ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5,500 ರೂ.ಎಫ್‌ಆರ್‌ಪಿ ನಿಗದಿಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಬೆಳಗ್ಗೆ ವೈದ್ಯರು ಪ್ರತಿಭಟನಾನಿರತ ರೈತ ಮುಖಂಡರ ಆರೋಗ್ಯ ತಪಾಸಣೆ ನಡೆಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರು, ಜಿಲ್ಲಾಧಿಕಾರಿಗಳು ಬೆಂಗಳೂರಿನಲ್ಲಿ ರೈತ ಮುಖಂಡರ ಸಭೆ ನಡೆಸಲು ಮುಖ್ಯಮಂತ್ರಿ, ಸಕ್ಕರೆ ಆಯುಕ್ತರು ಒಪ್ಪಿದ್ದಾರೆ. ಬೆಂಗಳೂರಿಗೆ ರೈತ ಮುಖಂಡರು ಆಗಮಿಸಿ ಸಭೆಯಲ್ಲಿ ಪಾಲ್ಗೊಳ್ಳಿ ಎಂದು ದೂರವಾಣಿಯ ಮೂಲಕ ತಿಳಿಸಿದ್ದಾರೆ ಎಂದರು.
ಉತ್ತರ ಕರ್ನಾಟಕದಲ್ಲಿರುವ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಬಗೆಹರಿಸಲು ಬೆಂಗಳೂರಿಗೇಕೆ ಪ್ರಯಾಣಿಸಬೇಕು. ಅ.15 ರಂದು ಬೆಳಗಾವಿ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಕ್ಕರೆ ಆಯುಕ್ತರೊಂದಿಗೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸಭೆ ಆಯೋಜಿಸಬೇಕು. ಜತೆಗೆ ಎಫ್‌ಆರ್‌ಪಿ ನಿಗದಿಗೊಳಿಸಿ, ಘೋಷಿಸಬೇಕು. ಅಲ್ಲಿಯವರೆಗೂ ನಮ್ಮ ನಿಲುವು, ಹೋರಾಟ ಬದಲಿಸದೆ ನಿರಂತರವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಉಪಾಧ್ಯಕ್ಷ ಶಿವಾನಂದ ಮುಗಳಿಹಾಳಿ, ಗಣೇಶ ಇಳಿಗೇರ, ರಾಜು ಪವಾರ, ರಾಘವೇಂದ್ರ ನಾಯಕ, ಮಲ್ಲಣ್ಣ ರಾಮದುರ್ಗ, ವೀರೇಶ ಮಂಡೇದ, ಪ್ರಕಾಶ ನಾಯಕ, ರವಿ ಸಿದ್ದಮ್ಮಣ್ಣವರ ಇತರರಿದ್ದರು.