ಮೈಸೂರು: ನಗರದಲ್ಲಿ ತಾರಾಲಯ (ಪ್ಲಾನೆಟೋರಿಯಂ) ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 2025 ಸೆಪ್ಟೆಂಬರ್ ಹೊತ್ತಿಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ 91 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಇದನ್ನು ಕಾರ್ಯಗತಗೊಳಿಸುತ್ತಿದೆ.
ವಿಶ್ವದ ಮೊದಲ ಎಲ್‌ಇಡಿ ಗುಮ್ಮಟದೊಂದಿಗೆ ಇದು ತಲೆಎತ್ತಲಿದ್ದು, ಇದು ಅತ್ಯಾಧುನಿಕವಾಗಿರಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಹೈಟೆಕ್ 15-ಮೀಟರ್ ಎಲ್ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಕೀರ್ತಿಗೂ ಪಾತ್ರವಾಗಲಿದೆ.
8ಕೆ ರೆಸಲ್ಯೂಶನ್ ಹೊಂದಿರುವ ಕಾಸ್ಮೊಸ್ ಹೈಟೆಕ್ 15-ಮೀಟರ್ ಎಲ್ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಓರೆಯಾದ ತಾರಾಲಯವಾಗಿದೆ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕಿ ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂ ತಿಳಿಸಿದ್ದಾರೆ.
ಎಲ್‌ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆಎರ್‌ಸ್‌ಎ-ಕಾಸ್ಮೊಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿ ಪಡಿಸುತ್ತಿವೆ. ಜತೆಗೆ, ನೆರವು ಸಹ ನೀಡುತ್ತಿವೆ.
ಪ್ರೊಜೆಕ್ಟರ್ ಬಳಕೆಯ ಬದಲಾಗಿ ಗುಮ್ಮಟವನ್ನು ಎಲ್‌ಇಡಿ ದೀಪಗಳ ಫಲಕಗಳಿಂದ ನಿರ್ಮಿಸಲಾಗುತ್ತಿದೆ. ಅದು ಕಂಪ್ಯೂಟರ್ ಸಿಸ್ಟಂನಿಂದ ನಿಯಂತ್ರಿಸಲ್ಪಡುತ್ತದೆ.
ಈ ತಾರಾಲಯ ನಿರ್ಮಾಣಕ್ಕೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ನೀಡಿದ್ದು, ಅಟಾಮಿಕ್ ಎನರ್ಜಿ ವಿಭಾಗ, ಬಾಹ್ಯಾಕಾಶ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ಹೆಚ್ಚುವರಿ ಸಹಾಯವನ್ನು ನೀಡಿವೆ ಎಂದು ಮಾಹಿತಿ ನೀಡಿದರು.