ಜಿಲ್ಲೆ

ಮುಂದಿನ ಪೀಳಿಗೆಗೆ ಪರಿಸರ ಉಳಿಸಿ

ಬೇಲೂರು: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಸಾಕಷ್ಟು ದುಷ್ಪರಿಣಾಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾದಾಗ ಮಾತ್ರ ಮುಂದಿನ ಪೀಳಿಗೆಗೆ ಪರಿಸರ ಉಳಿಸಲು ಸಾಧ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶಂಭೋಗೌಡ ಹೇಳಿದರು.

ಪಟ್ಟಣ ಸಮೀಪದ ಯಗಚಿ ಜಲಾಶಯದ ಆವರಣ ಭಾನುವಾರ ಬೇಲೂರಿನ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಕಸ ಸಂಗ್ರಹಣ ಡಬ್ಬಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್‌ನಿಂದಾಗುತ್ತಿರುವ ದುಷ್ಪರಿಣಾಮಗಳನ್ನು ಕಣ್ಣಾರೆ ಕಾಣುತ್ತಿದ್ದರೂ ಪ್ಲಾಸ್ಟಿಕ್ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಕಾಣುತ್ತಿದ್ದೇವೆ. ಇದರಿಂದ ಬೀದಿಯಲ್ಲಿ ಓಡಾಡುವ ಹಸು, ನಾಯಿ ಸೇರಿದಂತೆ ಇತರ ಪ್ರಾಣಿಗಳು ಪ್ಲಾಸ್ಟಿಕ್ ತಿನ್ನುವುದರಿಂದ ಅವುಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ಜತೆಗೆ ನಮ್ಮ ಪರಿಸರದಲ್ಲಿ ಸೇರಿಕೊಂಡರೆ ಅದು ಕರಗದೆ ಮಾಲಿನ್ಯ ಉಂಟು ಮಾಡುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪೇಪರ್ ಅಥವಾ ಬಟ್ಟೆ ಬ್ಯಾಗ್‌ಗಳನ್ನು ಬಳಸಿದರೆ ಪರಿಸರಕ್ಕೆ ಪೂರಕವಾಗುತ್ತದೆ. ಅಲ್ಲದೆ, ಜಲಾಶಯ ಸೇರಿದಂತೆ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಸೇರಿದಂತೆ ಯಾವುದೇ ವಸ್ತುವನ್ನು ಕಸ ಸಂಗ್ರಹಣೆ ಡಬ್ಬಿಗಳಲ್ಲೇ ಹಾಕುವಂತೆ ತಿಳಿಸಿದರು.

ಯಗಚಿ ಜಲಾಶಯ ವಿಭಾಗದ ಎಇ ಶಿವಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯಿಂದ ನೀಡಿರುವ ಪ್ಲಾಸ್ಟಿಕ್ ಸಂಗ್ರಹಣಕ್ಕೆ ಕಬ್ಬಿಣದ ಡಬ್ಬ ಉತ್ತಮವಾಗಿದೆ. ಚಿಕ್ಕಮಗಳೂರು ಹಾಗೂ ಬೇಲೂರಿಗೆ ಆಗಮಿಸುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಾಶಯ ವೀಕ್ಷಣೆಗೆ ಆಗಮಿಸುತ್ತಿದ್ದು ತಾವು ತಂದ ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಹಾಕದೆ ಕಸ ಸಂಗ್ರಹಣ ಡಬ್ಬಿಗೆ ಹಾಕಬೇಕು. ಜಲಾಶಯದ ಆವರಣ ಕಸ ಸಂಗ್ರಹಣೆಗೆ ರೋಟರಿ ಕ್ಲಬ್‌ನಿಂದ ಡಬ್ಬಿ ವಿತರಿಸಿರುವುದು ಶ್ಲಾಘನೀಯವಾಗಿದೆ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜು ಮಾತನಾಡಿ, ರೋಟರಿ ಸಂಸ್ಥೆಯಿಂದ ತಾಲೂಕಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಮತ್ತು ಪರಿಸರ ರಕ್ಷಣೆಗೆ ಒತ್ತು ಕೊಟ್ಟು ಹಾಗೂ ಜನರ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಸಾರ್ವಜನಿಕರು ಸಹ ಸಂಘ ಸಂಸ್ಥೆಗಳ ಇಂತಹ ಕಾರ್ಯಕ್ಕೆ ಸಹಕಾರ ನೀಡಿ ಅವರೂ ಸ್ವಚ್ಛತೆಯೊಂದಿಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಹಿರಿಯ ರೋಟರಿ ಸದಸ್ಯರಾದ ಬಿ.ಎಲ್.ರಾಜೇಗೌಡ, ಮೊಗಪ್ಪಾಗೌಡ, ವಿನೋದ್‌ಚೌಡ, ಪುಟ್ಟರಾಜು, ಎಚ್.ಕೆ.ರಮೇಶ್ ಸೇರಿದಂತೆ ಜಲಾಶಯದ ಸಿಬ್ಬಂದಿ ಇದ್ದರು.