ಚಾಮರಾಜನಗರ: ಉತ್ತಮ ಮೌಲ್ಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಶಿವಕುಮಾರಸ್ವಾಮಿ ತಿಳಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ, ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ 2005-06ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಸ್ಮಯ- 19 ಗುರುವಂದನಾ ಮತ್ತು ಸ್ನೇಹ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಗುರು-ಶಿಷ್ಯರ ಬಾಂಧವ್ಯ ಕ್ಷೀಣಿಸುತ್ತಿದ್ದು, ಶಿಷ್ಯನಿಗೆ ಗುರುಗಳಿಗೆ ನಮಸ್ಕರಿಸಿ ವಿದ್ಯೆ ಕಲಿಸುವ ಸ್ಥಿತಿ ಉಂಟಾಗಿದೆ. ಶಿಕ್ಷಕರಿಗೆ ಥಳಿಸುವ, ಶಿಕ್ಷಕರಿಗೆ ಗೌರವ ನೀಡದೇ ಇರುವ ಇಂತಹ ಕಾಲಘಟ್ಟದಲ್ಲಿ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸವಾಗಿದೆ. ಅಳಿದು ಹೋಗಿರುವ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಮಾತನಾಡಿ, ದೇಶದ ಸತ್ಪ್ರಜೆಗಳನ್ನು ಶಿಕ್ಷಕರು ರೂಪಿಸುತ್ತಾರೆ. ಗುರುಗಳು ಕಲಿಯುವಂತಹ ವಿಷಯವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಗುರುಗಳಿಂದ ಕಲಿತ ಪಾಠವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಿಕ್ಷಕರಾದ ಎಚ್.ಎಸ್.ಶಿವಕುಮಾರಸ್ವಾಮಿ, ಡಾ.ಕೆ.ಸಿ.ಬಸವಣ್ಣ, ಡಿ.ಎಸ್.ಸುರೇಶ್, ಡಾ.ಸಿ.ಬಿ.ವಿಕ್ರಮ್, ಎಸ್.ಮಾಧು, ಜಿ.ಎ.ಸರಸ್ವತಿ, ಎಂ.ಜೆ.ಜ್ಯೋತಿ, ಸುನೀತಾ, ಎಂ.ವಿ.ಜಗದೀಶ್, ಎಂ.ಗೀತಾ, ಸಿ.ಆರ್.ಶೀಲಾ, ಎಸ್.ಶಂಕರಮೂರ್ತಿ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.
ಪ್ರಾಂಶುಪಾಲ ಡಾ.ಕೆ.ಸಿ.ಬಸವಣ್ಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ನಾಗರಾಜು, ಉಪಾಧ್ಯಕ್ಷೆ ಎಂ.ಆರ್.ಸವಿತಾ, ಕಾರ್ಯದರ್ಶಿ ಪಿ.ಮಹದೇವಸ್ವಾಮಿ, ಸಂಯೋಜಕ ಕೆ.ಎಂ.ಯೋಗೇಶ್, ಖಜಾಂಚಿ ರಾಜೇಂದ್ರ, ಪ್ರಾಧ್ಯಾಪಕ ಡಿ.ಸುರೇಶ್, ಸಿ.ಬಿ.ವಿಕ್ರಮ್, ಎಸ್.ಮಾಧು, ಬಿ.ಎ.ಸರಸ್ವತಿ ಇತರರು ಇದ್ದರು.