ಜಿಲ್ಲೆ

ಮುಂದಿನ ದಿನಗಳಲ್ಲಿ ಶೈಕ್ಷಣಿಕ ಪದವಿಗಳು ಮುಖ್ಯವಾಗಲ್ಲ

ಮೈಸೂರು: ಮುಂದಿನ ದಿನಗಳಲ್ಲಿ ಶೈಕ್ಷಣಿಕ ಪದವಿಗಳು ಮುಖ್ಯವಲ್ಲ, ಜ್ಞಾನವೇ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ನಿವೃತ್ತ ಪ್ರಾಂಶುಪಾಲ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ಮರಿಮಲ್ಲಪ್ಪ ಪ್ರೌಢಶಾಲೆ ವತಿಯಿಂದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೂರು ವರ್ಷಗಳ ಹಿಂದೆ ವ್ಯಕ್ತಿಯ ಶರೀರವೇ ಪವರ್ ಆಗಿತ್ತು. ಬಳಿಕ ಆಸ್ತಿ-ಅಂತಸ್ತು ಆ ಸ್ಥಾನ ಪಡೆದುಕೊಂಡಿತು. ತದನಂತರ ಶಿಕ್ಷಣವೇ ಪವರ್ ಆಯಿತು. ಕಳೆದ 10-15 ವರ್ಷದಿಂದ ಶಿಕ್ಷಣದ ಬದಲಿಗೆ ಉದ್ಯೋಗವೇ ಪವರ್ ಆಗಿ ಬದಲಾಗಿದೆ. ಈಗ 20 ಪದವಿಗಳಿದ್ದರೂ ಎಷ್ಟು ಸಂಪಾದನೆ ಮಾಡುತ್ತಿಯಾ ಎಂದು ಕೇಳುತ್ತಾರೆ. ಮುಂದಿನ ದಿನಗಳಲ್ಲಿ ಉದ್ಯೋಗವಲ್ಲ, ಜ್ಞಾನವೇ ಪವರ್ ಆಗಲಿದೆ. ಆಗ ಪದವಿಗಳಿಗಿಂತ ಎಷ್ಟು ಜ್ಞಾನ ಸಂಪಾದನೆ ಮಾಡಿದ್ದೀಯಾ ಎಂಬುದು ಮುಖ್ಯವಾಗುತ್ತದೆ ಎಂದರು.

ಕೆಲಸಕ್ಕಾಗಿ ಅರ್ಜಿ ಹಾಕಬೇಕಿತ್ತು, ಈಗಲೂ ಇದೆ. ಈ ನಡುವೆ, ಕ್ಯಾಂಪಸ್ ಸಂದರ್ಶನ ಹೆಸರಿನಲ್ಲಿ ಉದ್ಯೋಗವೇ ಕಾಲೇಜುಗಳನ್ನು ಹುಡುಕಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಕೆಲಸವೇ ಮನೆ ಬಾಗಿಲಿಗೆ ಬರಲಿದೆ. ಅದನ್ನು ಪಡೆದುಕೊಳ್ಳಲು ಜ್ಞಾನದ ಸಾಮರ್ಥ್ಯ ಪ್ರದರ್ಶಿಸಬೇಕಾಗುತ್ತದೆ. ಜ್ಞಾನ ಇಲ್ಲದಿದ್ದರೆ ಯಾರೂ ಪರಿಗಣನೆ ಮಾಡಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಹಿಂದೆ ಎಸ್ಸೆಸ್ಸೆಲ್ಸಿ ಪಾಸಾದರೆ ಸಾಕು, ಬಳಿಕ ಪದವಿ ಸಿಕ್ಕರೆ ಸಾಕು, ಅದರ ನಂತರ ಒಂದು ಕೆಲಸ ದೊರೆತರೆ ಸಾಕು ಎಂಬ ಮನೋಭಾವವಿತ್ತು. ಆದರೆ, ಈಗಿನ ಯುವಜನರು ಜಗತ್ತಿಗೇ ಏಣಿ ಹಾಕಿ ಕುಳಿತಿದ್ದಾರೆ, ಜಗತ್ತನ್ನೇ ಆಳುತ್ತಿದ್ದಾರೆ. ಮೈಸೂರಿನಂಥ ಊರಿನಲ್ಲಿ ಬೆಳೆದ ಯುವಜನರು ವಿದೇಶದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಜ್ಞಾನ ಮತ್ತು ಉತ್ತಮ ನಡವಳಿಕೆಯಿಂದ ಜಗತ್ತನ್ನೇ ಆಳಬಹುದು. ಈ ಗುಣವಿಶೇಷವನ್ನು ಹೊಂದಿರುವ ಭಾರತೀಯರು ಅದನ್ನು ಸಾಧಿಸುತ್ತಿದ್ದಾರೆ. ಯಶಸ್ಸು ಆಕಸ್ಮಿಕವಲ್ಲ. ರ‌್ಯಾಂಕ್, ಹೆಚ್ಚಿನ ಅಂಕ ಸಹ ಆಕಸ್ಮಿಕವಾಗಿ ಸಿಗಲ್ಲ. ಅದು ಸಿಗುವುದು ಬುದ್ಧಿವಂತಿಕೆಯಿಂದ ಎಂದು ಹೇಳಿದರು.

ಹಣ, ಆಸ್ತಿ, ಅಧಿಕಾರ ಎಂಬ ಅಹಂಕಾರ ತುಂಬಿಕೊಂಡಿರುತ್ತದೆ. ಜ್ಞಾನ ಬೆಳೆದಂತೆಲ್ಲ ಅಹಂಕಾರ ನಿರಸನವಾಗಬೇಕು. ಎಲ್ಲ ಬಗೆಯ ಅಹಂ ಕಳೆದುಕೊಳ್ಳಬೇಕು. ಅಂಥ ವ್ಯಕ್ತಿ ನಿಬ್ಬೆರಗಾಗುವಂತೆ ಬೆಳೆಯುತ್ತಾನೆ ಎಂದರು.

ಈಗಿನ ಯುಗ ಅವಕಾಶಗಳ ಸ್ವರ್ಗ. ಯಾವ ಹಂತಕ್ಕಾದರೂ ಬೆಳೆಯಬಹುದು. ಎಂಥ ಗುರಿಯನ್ನಾದರೂ ಸಾಧಿಸಬಹುದು. ಅಂಥ ಕಾಲ ಇದು. ಆದ್ದರಿಂದ ಅವಕಾಶಗಳನ್ನು ಬಳಸಿಕೊಂಡು ಮುಂದೆ ನುಗ್ಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಿದುಳಿಗೆ ಮಾತ್ರ ಪಾಠ ಮಾಡಲಾಗುತ್ತಿದೆ. ಆದರೆ, ಕಿವಿ, ಮೂಗು, ಕಣ್ಣು ಇನ್ನಿತರ ಇಂದ್ರಿಯಗಳಿಗೆ ಪಾಠ ಮಾಡುತ್ತಿಲ್ಲ. ಅವುಗಳನ್ನು ಪರಿಣಾಮಕಾರಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ಇಂದ್ರಿಯಗಳನ್ನು ಜಾಗೃತಿಗೊಳಿಸಿ, ಅವುಗಳ ಸಾಮರ್ಥ್ಯವನ್ನು ವಿನಿಯೋಗಿಸಿಕೊಳ್ಳಬೇಕಿದೆ ಎಂದರು.

ಮರಿಮಲ್ಲಪ್ಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಮೈಸೂರು ದಕ್ಷಿಣ ವಲಯ ಬಿಇಒ ಸಿ.ಎನ್.ರಾಜು, ಶಾಲೆಯ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ, ಮುಖ್ಯೋಪಾಧ್ಯಾಯಿನಿ ಎಸ್.ಮಮತಾ ಇತರರು ಇದ್ದರು.