ವಿರಾಜಪೇಟೆ: ಜಿಲ್ಲೆಯ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯ. ಮುಂದಿನ ತಲೆಮಾರಿಗೂ ಇಲ್ಲಿನ ಜನಾಂಗ ಹಾಗೂ ಸಂಸ್ಕೃತಿ ಉಳಿಯಲಿ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಪೊಮ್ಮಕ್ಕಡ ಪರಿಷತ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಕ್ಕಡ ಪದಿನೆಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡವರು ಕೊಡಗಿನಲ್ಲಿ ನೆಲೆಸುವುದಕ್ಕಿಂತ ಹೆಚ್ಚಾಗಿ ಹೊರಜಿಲ್ಲೆ, ಹೊರರಾಜ್ಯದಲ್ಲಿ ನೆಲೆಸಿದ್ದಾರೆ. ಇದು ತಪ್ಪಲ್ಲ. ಆದರೆ ಕನಿಷ್ಠ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರು ಕೊಡಗಿನಲ್ಲಿ ಮತದಾರರ ಚೀಟಿ ಹೊಂದಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದ 30 ವರ್ಷ ಹಲವು ಕಾರ್ಯಕ್ರಮಗಳನ್ನು ಜನರಿಗೆ ನೀಡಲೂ ಕೇಳುಗರೇ ಕಾರಣ. ಕೇಳುಗರು ಕಾರ್ಯಕ್ರಮಗಳನ್ನು ಬಯಸಿದಾಗ ಮಾತ್ರ ನಮಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಹಾಗೇ ಕೊಡವ ಭಾಷೆ ಹಾಗೂ ಕೊಡವರ ಮೇಲೆ ಅಭಿಮಾನ ಇರುವ ಯಾವುದೇ ಜಾತಿ ಧರ್ಮದ ವ್ಯಕ್ತಿಗಳನ್ನು ಕೂಡ ನಾವು ಅಭಿನಂದಿಸಬೇಕಿದೆ. ಹಾಗಾದಾಗ ಮಾತ್ರ ಒಂದು ಭಾಷೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯಾವುದೇ ಜಾತಿ ಧರ್ಮಗಳಿರಲಿ, ಮಕ್ಕಳಿಗೆ ಮನೆಯಲ್ಲಿ ಮಾತೃಭಾಷೆಯನ್ನು ಕಲಿಸಬೇಕಿದೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಬಾರದು. ಕೆಲವರು ನಮ್ಮ ಉಡುಗೆ ತೊಡುಗೆ ಆಭರಣಗಳು ಬೇಕು. ಆದರೆ ಅವರಿಗೆ ನಮ್ಮ ಭಾಷೆ ಮಾತ್ರ ಬೇಕಿಲ್ಲ. ಇಂಗ್ಲಿಷ್ ಗೆ ಒತ್ತು ನೀಡುತ್ತಾರೆ. ಕೊಡವ ಭಾಷೆಯೇ ಗೊತ್ತಿಲ್ಲವೆಂಬಂತೆ ವರ್ತಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕೊಡವ ಸಮಾಜ ಸಂಸ್ಥೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದರೆ ಕೊಡವ ಜನಾಂಗದ ಪ್ರತಿಯೊಂದು ಕುಟುಂಬ ತಮ್ಮ ವಕ್ಕ ಸದಸ್ಯತ್ವ ತೆಗೆದುಕೊಳ್ಳುವ ಮೂಲಕ ಮಾತೃ ಸಂಸ್ಥೆಗೆ ಬಲ ತುಂಬಬೇಕಿದೆ. ಹಿರಿಯರು ದೂರದೃಷ್ಟಿಯಿಂದ ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಮುಂದಿನ ಪೀಳಿಗೆಗೂ ನಾವು ಉಳಿಸಿ ಬೆಳೆಸಬೇಕಿದೆ ಎಂದು ಮನವಿ ಮಾಡಿದರು.
ಕೊಡವ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಕ್ಕಡಕ್ಕೆ ಅರ್ಥವಿಲ್ಲದಾಗಿದೆ. ಹಿಂದಿನ ಮಳೆ ಗಾಳಿಯ ಕಕ್ಕಡ ಇದೀಗ ಕಾಣುತ್ತಿಲ್ಲ. ಸುಮಾರು ಐವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯೇ ಬೇರೆ. ಇತ್ತೀಚಿನ ವರ್ಷಗಳ ಪರಿಸ್ಥಿತಿ ಬೇರೆ. ಜನರು ಬದಲಾದಂತೆ ಪ್ರಕೃತಿಯಲ್ಲಿಯೂ ಬದಲಾವಣೆಯಾಗಿದೆ. ದೇಹದ ಉಷ್ಣಾಂಶವನ್ನು ಸಮತೋಲನವಾಗಿ ಇಟ್ಟುಕೊಳ್ಳಲು ನಮ್ಮ ಪೂರ್ವಿಕರು ಕಂಡುಕೊಂಡ ಉಪಾಯ ಈ ಕಕ್ಕಡದ ಹಲವು ತಿನಿಸುಗಳು ಎಂದರು.
ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಕಕ್ಕಡ ವಿಶೇಷತೆಗಳ ಬಗ್ಗೆ ತಿಳಿಸಿಕೊಟ್ಟರು. ಪೊಮ್ಮಕ್ಕಡ ಪರಿಷತ್ ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ, ಮಳವಂಡ ಪೂವಿ, ಅಜ್ಜಿಕುಟ್ಟೀರ ಶಾಂತಿ, ತೀತೀರ ಊರ್ಮಿಳಾ ಇತರರು ಇದ್ದರು.