ಜಿಲ್ಲೆ

ಮುಂದಿನ ಅವಧಿಗೂ ಸಿಎಂ ಮುಂದುವರಿಕೆ: ಸಚಿವ ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಮುಂದಿನ ಅವಧಿಗೂ ಅವರೇ ಮುಂದುವರಿಯುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ಕಾಲಕ್ಕೆ ರಾಜಕೀಯ ತೀರ್ಮಾನವನ್ನು ನಮ್ಮ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಬಿಟ್ಟು ಉಳಿದವರು ಏನೇ ಮಾತನಾಡಿದರೂ ಅದರಲ್ಲಿ ಪ್ರಯೋಜನವೂ ಇಲ್ಲ. ಅರ್ಥವೂ ಇರುವುದಿಲ್ಲ ಎಂದರು.

ಮೈಸೂರು ದಸರಾ ಮಹೋತ್ಸವದಲ್ಲಿ ನಮಗೆ ಯಾವುದೇ ರಾಜಕೀಯ ಕಾರ್ಯಸೂಚಿ ಇರಲಿಲ್ಲ. ಹೀಗಾಗಿಯೇ ಯಾವುದೇ ಆತಂಕವಿಲ್ಲದೆ ನಡೆಸಲಾಯಿತು. ದಸರಾ ಯಶಸ್ವಿಯಾಗಿ ಮಾಡಿದ್ದು, ಈ ಸಲ ಜನರ ದಸರಾ ನಡೆದಿದೆ.

11 ದಿನಗಳಲ್ಲಿ ಸಾವಿರ ಟನ್ ಕಸ ಸಂಗ್ರಹವಾಗಿದೆ. ಪೌರಕಾರ್ಮಿಕರ ಪರಿಶ್ರಮದಿಂದ ಇಡೀ ನಗರ ಸ್ವಚ್ಛವಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಮನೆ ಹಬ್ಬದಂತೆ ದಸರಾ ಮಾಡಿದರು. ಆರಂಭದಲ್ಲಿ ಸ್ವಲ್ಪ ಗೊಂದಲ ಇತ್ತು. ನಂತರ ಎಲ್ಲವೂ ಬಗೆಹರಿಯಿತು ಎಂದರು.

ಕೆಲ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳ ಸಾವು ಪ್ರಕರಣ ಆತಂಕಕಾರಿ ಸಂಗತಿ. 11 ಮಕ್ಕಳು ಮೃತಪಟ್ಟಿರುವುದು ವಿಷಾದಕರ. ಮಾರುಕಟ್ಟೆಗೆ ಔಷಧ ಬಿಡುಗಡೆಗೆ ಮುನ್ನ ಪರೀಕ್ಷೆ ನಡೆಸಬೇಕಿತ್ತು.

ಈಗ ಅದನ್ನು ಬಳಸಬೇಡಿ ಎಂದು ಕೇಂದ್ರ ಸರ್ಕಾರ ಹೇಳಿರುವುದು ಸರಿಯಾದ ಕ್ರಮವಲ್ಲ. ಅನಾಹುತ ಸಂಭವಿಸುವ ಮುನ್ನವೇ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದರು.