ಮುಂಡರಗಿ: ಪಟ್ಟಣದ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಕಳೆದರೂ ಸಂಬಂಧಪಟ್ಟವರು ಗಮನಹರಿಸದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ (ಕೆಆರ್ಡಿಸಿಎಲ್) 2016ರ ಸೆಪ್ಟೆಂಬರ್ನಲ್ಲಿ 205 ಕೋಟಿ ರೂ. ವೆಚ್ಚದಲ್ಲಿ ಹೂವಿನಹಡಗಲಿ ಮಾರ್ಗವಾಗಿ ಮುಂಡರಗಿ-ಹರಪನಹಳ್ಳಿ ಹೆದ್ದಾರಿ ಕಾಮಗಾರಿ ಪ್ರಾರಂಭಿಸಲಾಯಿತು. ಕಾಮಗಾರಿ ಗುತ್ತಿಗೆ ಪಡೆದಿದ್ದ ಡಿಬಿಎಲ್ ಟೋಲ್ ವೇಜ್ ಲಿಮಿಟೆಡ್ ಕಂಪನಿಯವರು 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಪಟ್ಟಣದ ಹೆಸರೂರ ಸರ್ಕಲ್ನಿಂದ ಕೆಇಬಿವರೆಗೆ ಅಂದಾಜು 500 ಮೀಟರ್ವರೆಗೆ ವಿಭಜಕ, ಚರಂಡಿ, ಪುಟ್ಪಾತ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ಹೆದ್ದಾರಿ ಕಿರಿದಾಗಿರುವುದರಿಂದ 1.5 ಮೀಟರ್ ಬದಲಿಗೆ 0.75 ಮೀಟರ್ ರಸ್ತೆ ವಿಭಜಕ ನಿರ್ವಿುಸಿ ಎಂದು ಅಂದಿನ ಪುರಸಭೆ ಆಡಳಿತ ಕಮಿಟಿ ನಿಗಮದ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಅದನ್ನು ಪರಿಗಣಿಸದೆ 1.5 ಮೀಟರ್ ವಿಭಜಕ ನಿರ್ವಿುಸಿದ್ದರು. ಬಳಿಕ ರಸ್ತೆ ವಿಭಜಕ ಅವೈಜ್ಞಾನಿಕ ಮತ್ತು ಕಳಪೆಯಾಗಿದೆ ಎಂದು ಆರೋಪಿಸಿ ಆಗಿನ ಪುರಸಭೆ ಆಡಳಿತ ಕಮಿಟಿಯವರು ವಿಭಜಕವನ್ನು ನಾಶ ಮಾಡಿದ್ದಾರೆ.
ಹೆದ್ದಾರಿ ಮಧ್ಯೆ ವಿಭಜಕ ನಿರ್ವಿುಸದ ಕಾರಣ ವಾಹನ ಸವಾರರು ಎಲ್ಲೆಂದರಲ್ಲಿ ರಸ್ತೆ ದಾಟುತ್ತಾರೆ. ಇದರಿಂದ ಅನಾಹುತವಾಗುವ ಸಂಭವವೇ ಹೆಚ್ಚಾಗಿದೆ. ಹೆದ್ದಾರಿ ಬದಿಯ ಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಆಯಾ ಭಾಗದ ಓಣಿಗಳಿಂದ ಬರುವ ಕಿರು ಚರಂಡಿಯ ಗಲೀಜು ನೀರು ಒಂದೆಡೆ ನಿಂತು ದುರ್ನಾತ ಬೀರುತ್ತಿದೆ. ಮಳೆಗಾಲದಲ್ಲಂತೂ ನೀರು ಚರಂಡಿಯಲ್ಲಿ ಹರಿದು ಹೋಗದೆ ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಪಟ್ಟಣದಲ್ಲಿ ಸ್ಥಗಿತಗೊಂಡ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪುರಸಭೆಯಲ್ಲಿ ಮತ್ತೊಮ್ಮೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. | ಎನ್.ಕೆ. ಡೊಂಬರ ಪುರಸಭೆ ಮುಖ್ಯಾಧಿಕಾರಿ, ಮುಂಡರಗಿ
ಕೆಲ ತೊಂದರೆಗಳಿಂದ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದರು. ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ. | ವಿ.ವಿ. ಅಂಗಡಿ ಕಾರ್ಯಪಾಲಕ ಇಂಜಿನಿಯರ್, ಕೆಆರ್ಡಿಸಿಎಲ್