ಶಿರಹಟ್ಟಿ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಾಡಳಿತ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇದಕ್ಕೆ ಜನರ ಸಹಕಾರವೂ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಕರೊನಾ ಮುಂಜಾಗ್ರತೆ ಕ್ರಮಗಳ ಬಗ್ಗೆ ಆಯಾ ತಾಲೂಕಾಡಳಿತ ಕೈಗೊಂಡಿರುವ ಕ್ರಮ, ವಸ್ತು ಸ್ಥಿತಿ ಅರಿಯಲು ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತರಕಾರಿ ಮತ್ತು ದಿನಸಿ ಮಾರುಕಟ್ಟೆ ಪರಿಶೀಲಿಸಿದರು. ಗದಗ ಜಿಲ್ಲೆಯ ತಾಂಡಾ ಪ್ರದೇಶಗಳಿಂದ ಬೇರೆಡೆ ದುಡಿಯಲು ತೆರಳಿದ್ದವರು ಈಗ ಸ್ವಗ್ರಾಮಕ್ಕೆ ವಾಪಸ್ ಬಂದಿದ್ದಾರೆ. ಅಂತಾರಾಜ್ಯ, ಜಿಲ್ಲೆಗಳಿಂದ ಬಂದಿರುವ ಇವರ ಆರೋಗ್ಯ ತಪಾಸಣೆ ಮಾಡಿ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಆಯಾ ಭಾಗದ ಅಧಿಕಾರಿಗಳು ನಿಗಾ ವಹಿಸಬೇಕು. ಕರೊನಾ ಹರಡದಂತೆ ತಡೆಯಲು ಯಾರೂ ಮನೆಯಿಂದ ಹೊರಗೆ ಬರಕೂಡದು. ಜನಸಂದಣಿಯಾಗದಂತೆ ನಡೆದುಕೊಳ್ಳಬೇಕು ಎಂದರು.
ಈ ವೇಳೆ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಮುಖ್ಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿದ್ದ ಜನಸಂದಣಿ ತಪ್ಪಿಸಲು ತರಕಾರಿ ಮಾರುಕಟ್ಟೆಯನ್ನು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಮಧ್ಯಾಹ್ನ 12ರಿಂದ ಮಧ್ಯಾಹ್ನ 3 ರವರೆಗೆ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಿಸಲು ಮಾಡಿರುವ ಕ್ರಮದ ಬಗ್ಗೆ ತಿಳಿಸಿದರು. ಎಲ್ಲ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅಗತ್ಯ ವಸ್ತುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ವೇಳೆ ಪಪಂ ಮುಖ್ಯಾಧಿಕಾರಿ ಮಲ್ಲೇಶ ಎಂ, ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್ಐ ಸುನೀಲಕುಮಾರ ನಾಯಕ, ಪಪಂ ಆರೋಗ್ಯ ಹಿರಿಯ ಸಹಾಯಕ ಎನ್.ಎಂ. ಹಾದಿಮನಿ ಇತರರಿದ್ದರು.
EndFragment