ಕರಜಗಿ: ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಆಹಾರ ಧಾನ್ಯ ವಿತರಿಸುವಾಗ ಕರೊನಾ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದ್ದರಿಂದ ಮುಖ್ಯಗುರು ಅಪ್ಪಣ್ಣ ಕುಲಕರ್ಣಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬದಲು ಆಹಾರ ವಿತರಿಸುವಂತೆ ಸರ್ಕಾರ ಆದೇಶಿಸಿದ್ದರಿಂದ ಗುರುವಾರ ಬೇಳೆ, ಅಕ್ಕಿ ವಿತರಿಸುವುದಾಗಿ ಮುಖ್ಯಗುರು ಬುಧವಾರ ಊರಲ್ಲಿ ಡಂಗೂರ ಸಾರಿದ್ದರು. ಇದರಿಂದ ಬೆಳಗಾಗುತ್ತಲೇ ಮಕ್ಕಳು ಶಾಲೆಯಲ್ಲಿ ಸೇರಿದ್ದರು. ಆದರೆ ಆವರಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಕೊನೆಯ ಪಕ್ಷ ಸಾಮಾಜಿಕ ಅಂತರವೂ ಇರಲಿಲ್ಲ.
ಮಕ್ಕಳ ಜನಸಂದಣಿ ಬಗ್ಗೆ ದಿಗ್ವಿಜಯ ನ್ಯೂಸ್ ಚಾನಲ್ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ ಮುಖ್ಯಗುರುಗಳನ್ನು ತರಾಟೆಗೆ ತೆಗೆದುಕೊಂಡು ಮುಂದಿನ ಆದೇಶದವರೆಗೆ ಅಮಾನತು ಮಾಡಿದ್ದಾರೆ.
ಕರಜಗಿಯಲ್ಲಿ ಮಕ್ಕಳಿಗೆ ಅಕ್ಕಿ, ಬೇಳೆ ನೀಡುವುದಾಗಿ ಡಂಗೂರ ಸಾರಿದ್ದರಿಂದ ಪ್ರಮಾದವಾಗಿದೆ. ಬೆಳಗಾಗುತ್ತಲೇ ಅಪಾರ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಿದ್ದು, ಕರೊನಾ ಜಾಗೃತಿ ಕೈಗೊಂಡಿರಲಿಲ್ಲ. ಹೀಗಾಗಿ ಮುಖ್ಯಗುರುಗಳನ್ನು ಅಮಾನತು ಮಾಡಲಾಗಿದೆ.
| ಚಿತ್ರಶೇಖರ ದೇಗಲಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಅಫಜಲಪುರ