ಜಯತೀರ್ಥ ಪಾಟೀಲ ಕಲಬುರಗಿ: ಕರೊನಾ ಕಾರ್ಮೋಡದ ಮಧ್ಯೆಯೂ ಕೃಷಿ ಚಟುವಟಿಕೆಗೆ ತೊಂದರೆ ಆಗದಂತೆ ಕೃಷಿ ಇಲಾಖೆ ಭರದ ಸಿದ್ಧತೆ ಆರಂಭಿಸಿದೆ. ಜೂನ್ನಲ್ಲಿ ಬಿತ್ತನೆ ಕಾರ್ಯ ಶುರುವಾಗುವುದರಿಂದ ಬೀಜ, ರಸಗೊಬ್ಬರ, ಪರಿಕರ ವಿತರಣೆ ಸೇರಿ ಯಾವುದಕ್ಕೂ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕರೊನಾ ಭೀತಿ ಮಧ್ಯೆಯೂ ರೈತ ತನ್ನ ಕಾಯಕಕ್ಕೆ ಅಣಿಯಾಗುತ್ತಿದ್ದಾನೆ.
ಮಾರ್ಚ್ , ಏಪ್ರಿಲ್ ನಲ್ಲಿ ಜಿಲ್ಲೆಯ ಹಲವೆಡೆ ಮಳೆ ಸುರಿದಿದ್ದು, ಇದನ್ನು ಆಧರಿಸಿ ರೈತಾಪಿ ವರ್ಗ ಭೂಮಿ ಹದ ಮಾಡುವುದರ ಜತೆಗೆ ಅಗತ್ಯ ಬೀಜ, ಪರಿಕರ, ಗೊಬ್ಬರ ಖರೀದಿಸುವಲ್ಲಿ ತೊಡಗಿಸಿಕೊಂಡಿದೆ. ಜೂನ್ ಮೊದಲ ಅಥವಾ ಎರಡನೇ ವಾರ ಮಳೆ ಬೀಳುತ್ತಿದ್ದಂತೆ ಬಿತ್ತನೆ ಚಟುವಟಿಕೆ ಚುರುಕುಗೊಳ್ಳಲಿದೆ.
ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಕ್ಷೇತ್ರ 10,40,570 ಹೆಕ್ಟೇರ್ ಇದ್ದರೆ, 3,95,497 ಹಿಡುವಳಿದಾರರಿದ್ದಾರೆ. 1,19,326 ಹೆಕ್ಟೇರ್ ನೀರಾವರಿ ಪ್ರದೇಶವಿದೆ. 32 ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ, ಗೊಬ್ಬರ ಪೂರೈಸಲಾಗುತ್ತಿದೆ. ಆದರೆ ಈ ಬಾರಿ ಪ್ರತಿ ಹೋಬಳಿಯ 4-5 ಹಳ್ಳಿಗಳಲ್ಲಿ ಬೀಜ ಖರೀದಿಗೆ ಅವಕಾಶ ಮಾಡಿಕೊಡಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ವ್ಯವಸ್ಥೆಗೆ ಮುಂದಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲು ನಿರ್ಧರಿಸಲಾಗಿದೆ.
ರೈತರ ಸಂಪರ್ಕ ಕೇಂದ್ರಗಳಲ್ಲಿ ಕೋವಿಡ್-19 ಜಾಗೃತಿ ಮೂಡಿಸುವ ಫ್ಲೆಕ್ಸ್ ಅಳವಡಿಸಲಾಗುತ್ತಿದೆ. ಜತೆಗೆ ಮೈಕ್ ಸಿಸ್ಟಂ ಮೂಲಕ ತಿಳಿವಳಿಕೆ ಮೂಡಿಸಲು ಯೋಜಿಸಲಾಗಿದೆ. ಸೋಡಿಯಂ ಹೈಡ್ರೋಕ್ಲೋರೈಡ್ ಸಿಂಪಡಣೆ ಮೂಲಕ ಅಗತ್ಯ ಮುಂಜಾಗ್ರತೆ ಕೈಗೊಳ್ಳಲು ನಿರ್ಧರಿಸಲಾಗಿದೆ.
ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದು, ಯಾವೊಬ್ಬ ರೈತರಿಗೂ ತೊಂದರೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಬಾರಿ ವಿನೂತನ ಮಾದರಿಯಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಕೋವಿಡ್-19 ಜಾಗೃತಿ ಕಾರ್ಯಕ್ರಮವೂ ನಡೆಯಲಿದೆ.
| ಡಾ.ರಿತೇಂದ್ರನಾಥ ಸೂಗೂರ
ಜಂಟಿ ಕೃಷಿ ನಿರ್ದೇಶಕ