ಹಾನಗಲ್ಲ: ತಾಲೂಕಿನ 49,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮುಂಗಾರು ಬಿತ್ತನೆ ಕೈಗೊಳ್ಳಬೇಕಿದ್ದು, ಇದಕ್ಕಾಗಿ 17,550 ಟನ್ ಗೊಬ್ಬರದ ಬೇಡಿಕೆ ಸಲ್ಲಿಸಲಾಗಿದೆ. ಅಗತ್ಯ ಬಿತ್ತನೆ ಬೀಜಗಳ ದಾಸ್ತಾನಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 34,944 ರೈತರಿಗೆ ಕಿಸಾನ್ ಸಮ್ಮಾನ್ ಹಣ ಜಮೆ ಆಗಿದೆ. ಪಡಿತರ ಚೀಟಿಯಿಲ್ಲದವರಿಗೂ ಪಡಿತರ ಸಾಮಗ್ರಿ ವಿತರಿಸುವಂತೆ ಸೂಚಿಸಲಾಗಿದೆ. ತಾಲೂಕಿನಲ್ಲಿ 696 ಹೊಸ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಿಗೂ ಪಡಿತರ ಬಿಡುಗಡೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ 6350 ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಒದಗಿಸಲಾಗಿದೆ. 1815 ರೂ. ಗಳ ಎಂ.ಎಸ್.ಪಿ. ದರದಂತೆ ಬೆಂಬಲ ಬೆಲೆಯ ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ 20,032 ಕ್ವಿಂಟಾಲ್ ಭತ್ತ ಖರೀದಿಸಲಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ 9786 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ತಿಳಿಸಿದರು.
ಕರೊನಾ ಸೋಂಕು ನಮಗೆಲ್ಲ ಹಲವು ಪಾಠಗಳನ್ನು ಕಲಿಸಿದೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಸಾಂಕ್ರಾಮಿಕ ರೋಗ ತಡೆಗಟ್ಟಬಹುದಾಗಿದೆ. ಶಹರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಕಂಡುಬರುತ್ತಿದ್ದು, ಹಳ್ಳಿಗಳೇ ಸೇಫ್ ಎಂಬ ವಾತಾವರಣ ಉಂಟಾಗಿದೆ ಎಂದರು.
ಕೇಂದ್ರ ಸರ್ಕಾರ 1 ಲಕ್ಷ 20 ಸಾವಿರ ಕೋಟಿ ಅನುದಾನವನ್ನು ಕೋವಿಡ್-19 ನಿರ್ವಹಣೆಗಾಗಿ ವಿನಿಯೋಗಿಸುತ್ತಿದೆ. ದೇಶದ ಜನತೆಯೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಉದಾರವಾಗಿ ಕೊಡುಗೆ ನೀಡುತ್ತಿದ್ದು, ಒಂದು ವಾರದಲ್ಲಿ 6500 ಕೋಟಿ ರೂಪಾಯಿ ಜಮೆಯಾಗಿದೆ. ಭಾನುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವ ಪ್ರಧಾನಿ ಮೋದಿ, ಹೊಸ ಆರ್ಥಿಕ ಪ್ಯಾಕೇಜ್ ನೀಡುವ ಕುರಿತು ರ್ಚಚಿಸಲಿದ್ದಾರೆ ಎಂದರು.
ಕೇಂದ್ರ ಸರ್ಕಾರಕ್ಕೆ ಎಲ್ಲ ರಾಜ್ಯಗಳೂ ಮುಂಗಡ ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸುತ್ತಿವೆ. ಆದರೆ, ಆರ್ಥಿಕ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಆರ್ಬಿಐ 3 ತಿಂಗಳ ಅವಧಿಗಾಗಿ (ಓಡಿ)ಶಾರ್ಟ್ಟಮ್ರ್ ಲೋನ್ಗಳನ್ನು ನೀಡುವುದಾಗಿ ಅಭಯವಿತ್ತಿದೆ. ಜಿಎಸ್ಟಿ, ಲಿಕ್ಕರ್ ಸೇರಿ ವಿವಿಧ ಮೂಲಗಳಿಂದ ರಾಜ್ಯದಲ್ಲಿ ಸಂಗ್ರಹಣೆಯಾಗಬೇಕಿದ್ದ ಆದಾಯ ಕುಂಠಿತವಾಗಿದ್ದು, ಇದುವರೆಗೆ 12 ಸಾವಿರ ಕೋಟಿ ರೂ. ಹಾನಿಯಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ 1 ವರ್ಷದ ಡಿಎ, ಆರ್ಎಗಳು ಸ್ಥಗಿತಗೊಳಿಸಿದ್ದು, ಇದರಿಂದಾಗಿ 50 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಎಂ.ಉದಾಸಿ ಉಪಸ್ಥಿತರಿದ್ದರು.