ಮೂಡಿಗೆರೆ: ಅನುದಾನ ಮಂಜೂರಾಗದೆ ಮುಂಗಡ ಕಾಮಗಾರಿ ನಡೆಸುವ ಮೊದಲು ನನ್ನ ಗಮನಕ್ಕೆ ತರಬೇಕು. ಗುಪ್ತವಾಗಿ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಿದರೆ ಅಂಥ ಕಾಮಗಾರಿಗಳ ಮಂಜೂರಾತಿಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂನಲ್ಲಿ ಮಂಗಳವಾರ ನಡೆದ ಮೂಡಿಗೆರೆ ಮತ್ತು ಕಳಸ ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕೆಲವೆಡೆ ಅಧಿಕಾರಿಗಳು ಶಾಸಕರ ಗಮನಕ್ಕೆ ತರದೆ ಕಾಮಗಾರಿ ನಡೆಸಿ ನಂತರ ಮಂಜೂರಾತಿಗೆ ಪ್ರಯತ್ನಿಸಿದ್ದು ಗೊತ್ತಾಗಿದೆ. ಅಂಥ ಮುಂಗಡ ಕಾಮಗಾರಿಯ ಅನುದಾನ ತಡೆಹಿಡಿಯಲಾಗುವುದು ಎಂದು ತಿಳಿಸಿದರು.
2 ತಿಂಗಳ ಹಿಂದೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ರೋಗಿಯೊಬ್ಬರು ಮೃತಪಟ್ಟಿದ್ದರು. ಇಂಥ ಪ್ರಕರಣ ಮರುಕಳಿಸಬಾರದು. ಒಂದೂವರೆ ವರ್ಷದಲ್ಲಿ ಆಸ್ಪತ್ರೆ ಅವ್ಯವಸ್ಥೆಯನ್ನು ಸರಿಪಡಿಸಲು ಹರಸಾಹಸಪಟ್ಟಿದ್ದರೂ ಆಸ್ಪತ್ರೆ ವಿರುದ್ಧ ಜನರಿಂದ ದೂರುಗಳು ಕೇಳಿಬರುತ್ತಿವೆ. ರಾತ್ರಿ ಪಾಳಿಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ದೂರುಗಳು ಬರದ ಹಾಗೆ ನೋಡಿಕೊಳ್ಳಬೇಕು. ಕರ್ತವ್ಯ ಲೋಪವೇಸಗುವ ಎಲ್ಲರನ್ನೂ ಅಮಾನತುಪಡಿಸಲು ಶಿಫಾರಸು ಮಾಡುತ್ತೇನೆ ಎಂದು ಎಚ್ಚರಿಸಿದರು.
ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕಾ ಮಾತನಾಡಿ, ಆಸ್ಪತ್ರೆಯಲ್ಲಿ 9 ವೈದ್ಯಾಧಿಕಾರಿಗಳಿದ್ದಾರೆ. ಹೆರಿಗೆ ವಿಭಾಗದಲ್ಲಿ ಇಬ್ಬರು ವೈದ್ಯರಿದ್ದಾರೆ. ಅನಸ್ತೇಶಿಯ ವಿಭಾಗದಲ್ಲಿ ಒಬ್ಬ ವೈದ್ಯರಿದ್ದಾರೆ. ಸರ್ಜನ್ ಹುದ್ದೆ ಖಾಲಿಯಿದೆ. ಎಲ್ಲ ವಿಭಾಗಗಳಲ್ಲೂ ತಲಾ ಇಬ್ಬರು ವೈದ್ಯರ ಅಗತ್ಯವಿದೆ. 147 ಮಹಿಳೆಯರಿಗೆ ಸಹಜ ಹೆರಿಗೆ, 40 ಮಂದಿಗೆ ಸೀಜರಿಯನ್ ನಡೆದಿದೆ. ಎಲ್ಲ ತಾಯಿ, ಮಗು ಆರೋಗ್ಯವಾಗಿದ್ದಾರೆ. 3 ಯಂತ್ರದಲ್ಲಿ 6047 ಬಾರಿ 19 ಮಂದಿಗೆ ಡಯಾಲಿಸಿಸ್ ನಡೆದಿದೆ. ಇನ್ನೂ 5 ಮಂದಿ ಡಯಾಲಿಸಿಸ್‌ಗಾಗಿ ಕಾಯುತ್ತಿದ್ದಾರೆ. ಅವರ ಡಯಾಲಿಸಿಸ್‌ಗಾಗಿ ಇನ್ನೊಂದು ಯಂತ್ರ ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಹರೀಶ್ ಬಾಬು ಮಾತನಾಡಿ, 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಗರ್ಭ ಕ್ಯಾನ್ಸರ್ ಮತ್ತು ಪುರುಷರಿಗೆ ಇತರ ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲು ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಯ ನೇತೃತ್ವದ ತಂಡವನ್ನು ಮನೆಮನೆಗೆ ಕಳಿಸಲಾಗುವುದು. ಪ್ರತಿದಿನ 30 ಮನೆಯಲ್ಲಿ ತಪಾಸಣೆ ನಡೆಸಲಿದ್ದಾರೆ. ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುವುದು. ಗಂಭೀರ ಪ್ರಕರಣಗಳನ್ನು ಚಿಕ್ಕಮಗಳೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಂಕಸಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಿಡುವಾಳೆ, ಬೆಟ್ಟಗೆರೆ, ಕಳಸ, ಬಾಳೆಹೊಳೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ ಎಂದು ಮಾಹಿತಿ ನೀಡಿದರು. ಕೊರತೆ ಇರುವ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಜೆಜೆಎಂ ಮತ್ತಿರರ ಯೋಜನೆಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕಿಗೆ 375 ಕಾಮಗಾರಿ ಮಂಜೂರಾಗಿದೆ. 148 ಕಾಮಗಾರಿಗಳ ಟೆಂಡರ್ ನಡೆದಿದೆ. 142 ಕಾಮಗಾರಿ ಪೂರ್ಣಗೊಂಡಿದೆ. 73 ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೆಡೆ ಜೆಜೆಎಂ ಕಾಮಗಾರಿ ವಿಳಂಬವಾಗಲು ಮೆಸ್ಕಾಂನಿಂದ ವಿದ್ಯುತ್ ಪೂರೈಕೆ ವಿಳಂಬವಾಗುವ ಕಾರಣವಾಗಿದೆ. ನಿಯಮದ ಪ್ರಕಾರ 3 ಲಕ್ಷ ರೂಪಾಯಿ ಮೆಸ್ಕಾಂ ಕಾಮಗಾರಿಗೆ ನೀಡಲಾಗುತ್ತದೆ. ಈಗ ಸಲಕರಣೆಗಳ ಬೆಲೆ ಹೆಚ್ಚಾಗಿರುವ ಕಾರಣ 5 ಲಕ್ಷದಿಂದ 6 ಲಕ್ಷ ರೂ. ಖರ್ಚಾಗುತ್ತಿದೆ. ಹಾಗಾಗಿ ಮೆಸ್ಕಾಂ ಕೆಲಸ ನನೆಗುದ್ದಿಗೆ ಬೀಳುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್ ಮಾಹಿತಿ ನೀಡಿದರು. ನಯನಾ ಮೋಟಮ್ಮ ಮಾತನಾಡಿ, ಮೆಸ್ಕಾಂಗೆ ನೀವೇ ಹಣ ಸಂದಾಯ ಮಾಡಬೇಕು. ಕಳಸ, ಹೊನ್ನೆಕಾಡು, ಸಾಲ್ಮರ ಗ್ರಾಮಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಕೆಡಿಪಿ ಸದಸ್ಯ ಮಹಮ್ಮದ್ ರಫೀಕ್, ಕಳಸ ತಾಲೂಕಿನ ಬಹುತೇಕ ಕಡೆ ಜೆಜೆಎಂ ಕಾಮಗಾರಿ ಮಂಜೂರಾಗಿ ನಾಲ್ಕೈದು ವರ್ಷ ಕಳೆದಿದೆ. ಈಗ ಕಾಮಗಾರಿ ಸಲಕರಣೆಗಳ ಬೆಲೆ ಹೆಚ್ಚಾಗಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಮಗಾರಿ ಪರಿಕರಗಳ ಬೆಲೆ ಹೆಚ್ಚಾದರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು. ಕಾಮಗಾರಿ ತ್ವರಿತವಾಗಿ ಮುಗಿಸಬೇಕು ಎಂದು ತಾಕೀತು ಮಾಡಿದರು.
ಕೆಡಿಪಿ ಸದಸ್ಯರಾದ ಯು.ವಿ.ಸುರೇಂದ್ರ, ಉದಯ, ಸಂಪತ್‌ಕುಮಾರ್, ಕುನ್ನಳ್ಳಿ ರವಿ, ಸರಸ್ವತಿ, ಪೀಟರ್ ಲಾರೆನ್ಸ್ ಡಿಸೋಜ, ಮೂಡಿಗೆರೆ ತಹಸೀಲ್ದಾರ್ ರಾಜಶೇಖರಮೂರ್ತಿ, ಕಳಸ ತಹಸೀಲ್ದಾರ್ ಶಾರದಾ, ತಾಪಂ ಆಡಳಿತಾಧಿಕಾರಿ ಸಿ.ಎಂ.ಮಹೇಶ್‌ಕುಮಾರ್, ಇಒ ದಯಾವತಿ, ಮೆಸ್ಕಾಂ ಎಇಇ ಜಿತೇಂದ್ರ ಇತರರಿದ್ದರು.