ಜಿಲ್ಲೆ

ಮೀಸಲು ಹೆಚ್ಚಳಕ್ಕೆ ಕಾನೂನು ರಕ್ಷಣೆ ಇಲ್ಲ: ಸಿದ್ದರಾಮಯ್ಯ ಟೀಕೆ

ಮೈಸೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರ ಕಾಯ್ದೆ ಜಾರಿಯ ಬದಲು ಕೇವಲ ಸುಗ್ರೀವಾಜ್ಞೆ ಹೊರಡಿಸಿದೆ. ಕೇಂದ್ರ ಸರ್ಕಾರ 9ನೇ ಷೆಡ್ಯೂಲ್‌ಗೆ ಸೇರಿಸದೆ ಇದ್ದರೆ ಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ರಕ್ಷಣೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚು ಇರಬಾರದೆಂದು 1992ರಲ್ಲಿ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ ಆದೇಶ ನೀಡಿದೆ. ಆದರೆ ಪ್ರಸ್ತುತ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವುದು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಮೀಸಲಾತಿ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.66ರಷ್ಟು ಅಗುತ್ತದೆ. ಹಾಗಾಗಿ, 9ನೇ ಷೆಡ್ಯೂಲ್‌ಗೆ ಸೇರಿಸದೆ ಇದ್ದರೆ ಮೀಸಲಾತಿಗೆ ಕಾನೂನಿನ ರಕ್ಷಣೆ ಇರುವುದಿಲ್ಲ. ಆದ್ದರಿಂದಲೇ ನಾನು ವಿಶೇಷ ಅಧಿವೇಶನ ಕರೆದು ಕಾಯ್ದೆ ಮಾಡುವಂತೆ ಒತ್ತಾಯ ಮಾಡಿದ್ದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರವೆಂದು ಹೇಳಿಕೊಳ್ಳುವ ಬಿಜೆಪಿಯವರು ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಮೀಸಲಾತಿ ಹೆಚ್ಚಿಸಿದ್ದು ನಾನು ಎಂದು ಸಚಿವ ಶ್ರೀರಾಮುಲು ಹೇಳಿಕೊಳ್ಳ್ತುತ್ತಿದ್ದಾರೆ. ಆದರೆ ಮೈತ್ರಿ ಸರ್ಕಾರ ಇದ್ದಾಗಲೇ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆಗ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದರು. ಎರಡು ವರ್ಷಗಳ ಬಳಿಕ ಸಮಿತಿ ನೀಡಿದ ವರದಿಯನ್ನು ಸರ್ಕಾರ ಒಪ್ಪಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದರೂ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಧರಣಿ ಕುಳಿತುಕೊಳ್ಳುವರೆಗೂ ಏಕೆ ಹೆಚ್ಚಳ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತಂದು ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ರಾಜೀವ್‌ಗಾಂಧಿ, ಪಿ.ವಿ.ನರಸಿಂಹರಾವ್ ಅವರ ಪ್ರಯತ್ನದ ಫಲವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ. ಇದನ್ನು ವಿರೋಧಿಸಿ ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ರಾಮಾಜೋಯಿಷ್ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಈಗ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಮಾತನಾಡುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರೆಲ್ಲ ಆಗ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.

ಆರೋಪ ಮುಚ್ಚಿಕೊಳ್ಳಲು ಆಮಿಷ
ಪತ್ರಕರ್ತರಿಗೆ ಆಮಿಷವೊಡ್ಡುವ ಮೂಲಕ ರಾಜ್ಯದಲ್ಲಿರುವುದು ಶೇ.40ರ ಕಮಿಷನ್ ಸರ್ಕಾರ ಎನ್ನುವುದು ಮತ್ತೆ ಸಾಬೀತಾಗಿದೆ. ತಮ್ಮ ಹಗರಣಗಳನ್ನು ಬರೆಯದಂತೆ ಮುಚ್ಚಿಕೊಳ್ಳಲು ದೀಪಾವಳಿ ಗಿಫ್ಟ್ ನೀಡಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಸರ್ಕಾರ ಪಡೆದಿರುವ ಕಮಿಷನ್ ಹಣದಲ್ಲಿ ಗಿಫ್ಟ್ ಹಂಚಿದ್ದಾರೆ. ಆದರೆ ಸಿಎಂ ಈ ಬಗ್ಗೆ ತನಗೆ ಗೊತ್ತಿಲ್ಲ ಅಂದರೆ ನಂಬಲು ಸಾಧ್ಯವೇ? ಬಿಜೆಪಿಯವರಷ್ಟು ಲಜ್ಜೆಗೆಟ್ಟವರು, ಭಂಡರು ಯಾರೂ ಇಲ್ಲ. ಏನೇ ಮಾಡಿದರೂ ಭಂಡತನದಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಆರ್‌ಎಸ್‌ಎಸ್ ಸುಳ್ಳಿನ ಕಾರ್ಖಾನೆ ಇದ್ದಂತೆ, ಅವರು ಬರೆದುಕೊಟ್ಟಿದ್ದನ್ನು ಬಿಜೆಪಿಯವರು ಓದುತ್ತಾರೆ. ನನ್ನ ಇಮೇಜ್ ಕುಗ್ಗಿಸಲು ಟಾರ್ಗೆಟ್ ಮಾಡಿಕೊಂಡು ಆರೋಪ ಮಾಡುತ್ತಾರೆ. ನಾನು ಟೀಕೆ ಮಾಡುವುದರಿಂದ ಬಿಜೆಪಿಗೆ ಲಾಭ ಎನ್ನುವ ಆ ಪಕ್ಷದ ರಾಜ್ಯಾಧ್ಯಕ್ಷ ಒಬ್ಬ ಜೋಕರ್. ಈ ಎಲ್ಲ ವಿಷಯಗಳನ್ನು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಕರೆದು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಇನ್ಸ್‌ಪೆಕ್ಟರ್ ನಂದೀಶ್ ಅಮಾನತು ಆದ ಒತ್ತಡದಲ್ಲಿ ಮೃತಪಟ್ಟಿರುವುದಕ್ಕೆ ಸರ್ಕಾರವೇ ಹೊಣೆ. 70 ರಿಂದ 80 ಲಕ್ಷ ರೂ. ಕೊಟ್ಟು ಬಂದಿದ್ದ ಎಂದು ಸಚಿವ ಎಂಟಿಬಿ ನಾಗರಾಜ್ ಅವರೇ ಖುದ್ದು ಹೇಳಿದ್ದಾರೆ. ಹೀಗಾಗಿ ಈ ಹಣ ಯಾರಿಗೆ ಹೋಗಿದೆ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಮುಖ್ಯಮಂತ್ರಿ, ಗೃಹ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನವೆಂಬರ್‌ಗೆ ಪಟ್ಟಿ ಸಿದ್ಧ
ಮುಂದಿನ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನವೆಂಬರ್ ಅಂತ್ಯಕ್ಕೆ ಸಿದ್ಧವಾಗಲಿದೆ. ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆದಿದ್ದು, ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಜನರ ಒಲವು ಕಾಂಗ್ರೆಸ್ ಪರ ಇದ್ದು, ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.