ಜಿಲ್ಲೆ

ಮೀಸಲು ಪಟ್ಟಿ ಬಿಡುಗಡೆಗೊಳಿಸಿದರೆ ಶೀಘ್ರ ಚುನಾವಣೆ: ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ

ಮೈಸೂರು: ರಾಜ್ಯ ಸರ್ಕಾರವು ಮೀಸಲು ಪಟ್ಟಿ ಬಿಡುಗಡೆಗೊಳಿಸಿದರೆ ಮುಂದಿನ ಮಾರ್ಚ್, ಏಪ್ರಿಲ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಗಳಿಗೆ ಕಳೆದ ಒಂದೂವರೆ ವರ್ಷದಿಂದ ಚುನಾವಣೆ ನಡೆಸಲಾಗಿಲ್ಲ.

ಸರ್ಕಾರವು ಕ್ಷೇತ್ರ ಮರು ವಿಂಗಡಣೆ ಹಾಗೂ ಮೀಸಲು ಪ್ರಕಟಿಸದಿರುವುದು ಇದಕ್ಕೆ ಕಾರಣ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.

ನನಗೆ ದೊರೆತ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವು ಕ್ಷೇತ್ರ ಮರು ವಿಂಗಡಣೆ ಕಾರ್ಯ ಪೂರ್ಣಗೊಳಿಸಿದೆ.

ಮೀಸಲು ಪಟ್ಟಿ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ. ಶೀಘ್ರ ಇದನ್ನು ಮುಗಿಸುವಂತೆ ಕಾಲಮಿತಿ ನಿಗದಿಪಡಿಸಿ ಮತ್ತೊಂದು ಪತ್ರ ಬರೆಯಲಾಗುವುದು ಎಂದರು.

ಈ ಮೊದಲು ರಾಜ್ಯ ಚುನಾವಣಾ ಆಯೋಗವೇ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿ ನಿಗದಿಪಡಿಸುತ್ತಿತ್ತು. ಆದರೀಗ ರಾಜ್ಯ ಸರ್ಕಾರವೇ ಅದರ ಜವಾಬ್ದಾರಿ ಹೊತ್ತಿದೆ. ಸರ್ಕಾರವೇ ನಿಗದಿತ ಸಮಯದಲ್ಲಿ ಈ ಕಾರ್ಯ ಪೂರ್ಣಗೊಳಿಸಬೇಕಿದೆ ಎಂದರು.