ನಾಪೋಕ್ಲು: ನಾಲಡಿ ಗ್ರಾಮದ ಸರ್ವೇ ಸಂಖ್ಯೆ 2/1ರಲ್ಲಿ 240 ಹೆಕ್ಟೇರ್, ಯವಕಪಾಡಿ ಗ್ರಾಮದ ಸರ್ವೇ ಸಂಖ್ಯೆ 250/9ರಲ್ಲಿ 296.08 ಹೆಕ್ಟೇರ್ ಮತ್ತು ಕುಂಜಿಲ ಗ್ರಾಮದ ಸರ್ವೇ ಸಂಖ್ಯೆ 1/5 ರಲ್ಲಿ 241 ಹೆಕ್ಟೇರ್ ಸಿ ಮತ್ತು ಡಿ ವರ್ಗದ ಜಮೀನನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-5 ರನ್ವಯ ಮೀಸಲು ಅರಣ್ಯವೆಂದು ಘೋಷಿಸಲು ಆದೇಶ ಬಂದಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ವೈ.ಅಶೋಕ್ ಕುಮಾರ್ ಹೇಳಿದರು.
ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯಲ್ಲಿ ಸಿ ಮತ್ತು ಡಿ ವರ್ಗದ ಜಮೀನನ್ನು ಕರ್ನಾಟಕ ಅರಣ್ಯ ಅಧಿನಿಯಮ 1963ರ ಕಲಂ-05 ರನ್ವಯ ಮೀಸಲು ಅರಣ್ಯವೆಂದು ಘೋಷಿಸುವ ವಿಷಯ ಕುರಿತು ಚರ್ಚಿಸಲು ಸೋಮವಾರ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು. ಮೀಸಲು ಅರಣ್ಯವೆಂದು ಘೋಷಿಸಲು ಅರಣ್ಯ ಇಲಾಖೆಯಿಂದ ಆದೇಶ ಬಂದಿರುವುದಾಗಿ ಮಾಹಿತಿ ನೀಡಿದರು.
ಕಂದಾಯ ಪರಿವೀಕ್ಷಕ ರವಿ ಕುಮಾರ್ ಮಾತನಾಡಿ ಸದರಿ ಸರ್ವೇ ಸಂಖ್ಯೆಯ ಜಮೀನಿನಲ್ಲಿ ನಮೂನೆ 57 ಮತ್ತು ನಮೂನೆ 53ರಲ್ಲಿ ಮಂಜೂರಾತಿಗಾಗಿ ಬಂದಿರುವ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಮಾಹಿತಿ ನೀಡಿದರು. ಭಾಗಮಂಡಲ ವಲಯ ಅರಣ್ಯಾಧಿಕಾರಿ ಗ್ರಾಮಸ್ಥರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ, ಯವಕಪಾಡಿ, ನಾಲಡಿ ಮತ್ತು ಮರಂದೋಡ ಗ್ರಾಮಗಳಲ್ಲಿ ಈಗಾಗಲೇ ವಾಸದ ಮನೆಯನ್ನು ನಿರ್ಮಿಸಿರುವ, ಕೃಷಿ ಮಾಡಿಕೊಂಡು ಅನುಭವ ಸ್ವಾಧೀನದಲ್ಲಿರುವ ಜಾಗವನ್ನು ಹೊರತುಪಡಿಸಿ ಜಮ್ಮಾ ಮಲೆಗೆ ಹೋಗುವ ಬಂಡಿ ದಾರಿ, ಕುಡಿಯುವ ನೀರಿನ ಮೂಲ, ದೇವಸ್ಥಾನಗಳಿಗೆ ಹೋಗುವ ದಾರಿಗೆ ಅಡ್ಡಿಪಡಿಸದಂತೆ ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆ ಅಧಿಕಾರಿಗೆ ಕಳುಹಿಸಿಕೊಡುವಂತೆ ತೀರ್ಮಾನಿಸಿದರು.
ಪಂಚಾಯಿತಿ ಅಧ್ಯಕ್ಷೆ ಪಿ.ಎಲ್.ಶಿಲ್ಪಾ ಮಾತನಾಡಿ, ಗ್ರಾಮಸ್ಥರ ಮನವಿಯನ್ನು ಸಂಬಂಧಿಸಿದ ಅಧಿಕಾರಿಗೆ ಕಳುಹಿಸಲು ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾಮ ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಬೀನಾ ಸುಚಿತ್ರಾ, ಸದಸ್ಯರಾದ ಚೋಯಮಾಡಂಡ ಹರಿ ಮೊಣ್ಣಪ್ಪ, ಲೀಲಾವತಿ, ನಂಬುಡಮಂಡ ಶೈಲ, ಭರತ್ ಚಂದ್ರ ದೇವಯ್ಯ, ಕುಂಡಂಡ ರಜಾಕ್, ಕೋಡಿಮಣಿಯಂಡ ಬೋಪಣ್ಣ, ಸಂಪನ್ ಅಯ್ಯಪ್ಪ ಸೇರಿದಂತೆ ಅರಣ್ಯ, ಕಂದಾಯ, ಭೂ ಮಾಪನ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.