ಜಿಲ್ಲೆ

ಮೀಸಲಾತಿಯ ಪರಿವೇ ಇಲ್ಲ ; ಒಡನಾಡಿ ಬಿಡುಗಡೆ ಸಮಾರಂಭದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಅಭಿಮತ

ತುಮಕೂರು: ಶೋಷಿತರಿಗೆ ಬಡತನವೇ ದೊಡ್ಡ ಶಕ್ತಿ, ಸಮಾಜದಲ್ಲಿ ಯಾರು ಶಿಕ್ಷಣದಿಂದ ದೂರ ಉಳಿದಿದ್ದರೋ ಅವರೇ ಮುಂದೆ ಶಿಕ್ಷಕರಾಗಿ ಪಾಠ ಹೇಳಿ ಹಲವು ಬದಲಾವಣೆಗೆ ಕಾರಣರಾದರು ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ನಗರದ ಬಾಲಭವನದಲ್ಲಿ ಭೂಮಿ ಬಳಗ ಹಾಗೂ ಎಚ್.ಕೆಂಚಮಾರಯ್ಯ ಅಭಿಮಾನಿ ಬಳಗ ಭಾನುವಾರ ಆಯೋಜಿಸಿದ್ದ ಅಭಿನಂದನಾ ಗ್ರಂಥ ‘ಒಡನಾಡಿ’ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಶೋಷಿತರ ಬಗ್ಗೆ ಬರೆಯುವುದು ಕಷ್ಟದ ಕೆಲಸ, ದೇಶದಲ್ಲಿ ಬದಲಾವಣೆಯ ಕೂಗು ಕೇಳುತ್ತಿದೆ. ರಾಜ್ಯದಲ್ಲಿ ಮೀಸಲಾತಿ ಹೋರಾಟ ಹೆಚ್ಚುತ್ತಿವೆ, ಮೀಸಲಾತಿ ಏಕೆ ಬೇಕು, ಯಾರಿಗೆ ಬೇಕು ಎಂಬ ಪರಿವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಸಂವಿಧಾನದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದರು. 1987ರಲ್ಲಿ ಮಂಡಲ್ ವರದಿಯನ್ವಯ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ, ಅದರ ಪ್ರಮಾಣವನ್ನು ಶೇ.52 ಮೀರದಂತೆ ನೋಡಿಕೊಳ್ಳಲಾಯಿತು. ಅಂದು ಮೀಸಲಾತಿ ವಿರೋಧಿಸಿದ್ದ ಜನರೇ ಇಂದು ನಮಗೆ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ ಎಂದರು.

ನೀವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶೋಷಿತರೆ, ಜನರು ನಿಮ್ಮನ್ನು ಮುಟ್ಟಿಸಿಕೊಳ್ಳುತ್ತಿಲ್ಲವೇ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ ಮುಂದುವರಿದಿರುವ ನಿಮಗೆ ನಾಲ್ಕು ಜನರನ್ನು ಸಾಕುವ ಶಕ್ತಿ ಇದ್ದರೂ ಏಕೆ ಮೀಸಲಾತಿ ಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು. ದಲಿತರು ವಿದ್ಯಾವಂತರಾದರು, ರಾಜಕಾರಣಿಯಾದರು, ಸರ್ಕಾರಿ ನೌಕರರಾದರು ದಲಿತ ಎನ್ನುವ ಹಣೆಪಟ್ಟಿ ಕಳಚುವುದಿಲ್ಲ, ದಲಿತನಾಗಿರುವುದಕ್ಕೆ ಹೆಮ್ಮೆ ಇದೆ. ನನಗೆ ಅಳುಕಿಲ್ಲ. ಹಿಂದುಳಿದ ವರ್ಗ, ದಲಿತರು ಒಂದಾದರೆ ಏನಾದರೂ ಮಾಡಬಹುದು, ಐದು ವರ್ಷ ಸಚಿವರಾಗಿದ್ದಕ್ಕೆ 30 ಸಾವಿರ ಕೋಟಿ ಅನುದಾನ ತಂದಿದ್ದೆ ಎಂದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆ ಮೌಲ್ಯಗಳನ್ನು ಕಳೆದುಕೊಂಡಿವೆ, ಸರ್ಕಾರಿ ಶಾಲೆಗಳು ದಲಿತರು, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮೀಸಲಾಗಿರುವುದು ವಿಪರ್ಯಾಸ. ಹಣವಂತರು ಶಿಕ್ಷಣ ಕ್ಷೇತ್ರ ಪ್ರವೇಶಿಸುವ ಮೊದಲು ಸರ್ಕಾರಿ ಶಾಲೆಗಳೇ ದೇಗುಲವಾಗಿತ್ತು. ಶಿಕ್ಷಕರು ದೇವರಾಗಿದ್ದರು. ಮಕ್ಕಳ ಮೇಲೆ ಪ್ರಭಾವ ಬೀರಿ ಉನ್ನತ ಬದುಕು ಕಟ್ಟಿಕೊಟ್ಟಿದ್ದರು ಎಂದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆೆಂಚಮಾರಯ್ಯ ಅಧಿಕಾರಿಯಾಗಿ, ರಾಜಕಾರಣ ಪ್ರವೇಶಿಸಿದ ನಂತರ ಅವರೊಂದಿಗೆ ಒಡನಾಟ ಹೆಚ್ಚಿತ್ತು, ಯಾರ ಮೇಲೂ ದ್ವೇಷ ಸಾಧನೆ ಮಾಡದ ರಾಜಕಾರಣಿ ಎಂದರೆ ಕೆಂಚಮಾರಯ್ಯ ಮಾತ್ರ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ, ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಶಿವಶಂಕರ್, ಅಭಿನಂದನೆ ಸ್ವೀಕರಿಸಿದ ಕೆಂಚಮಾರಯ್ಯ ಮಾತನಾಡಿದರು. ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಶರಣರು, ಮಾದಾರ ಚೆನ್ನಯ್ಯ ಪೀಠದ ಬಸವ ಮೂರ್ತಿ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಗೋಪಾಲಕೃಷ್ಣ, ಲಿಡ್ಕರ್ ಅಧ್ಯಕ್ಷ ಓ.ಶಂಕರ್ ಇದ್ದರು.

ಇತಿಹಾಸದ ಪರಿವೆ ಇಲ್ಲದ ಯುವಕರ ನಡುವೆ ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಯುತ್ತ ಎನ್ನುವ ಅನುಮಾನಗಳಿವೆ. ಶೋಷಿತ ಸಮುದಾಯಗಳ ಅವಮಾನವನ್ನು ಎದೆಗೆ ಇಳಿಸಿಕೊಂಡು ಮುಂದೆ ಬರಬೇಕು, ಸಂವಿಧಾನದ ಮೂಲ ಆಶಯವೇ ಮಾನವೀಯ ಮೌಲ್ಯ. ಅದನ್ನು ಅಧಿಕಾರಿಗಳು ಅಳವಡಿಸಿಕೊಳ್ಳೋಣ, ನೈತಿಕ ಸ್ವಾಭಿಮಾನದಲ್ಲಿ ಶ್ರೇಷ್ಠ ಬದುಕು ಕಟ್ಟಿಕೊಂಡ ಬಸವಣ್ಣ ಅವರಂತೆ ಮನಪರಿವರ್ತಿಸುವ ಕೆಲಸ ಮಾಡೋಣ. ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧ ಪ್ರಾಧಿಕಾರದ ಮಾಜಿ ಅಧ್ಯಕ್ಷ