ಬಸವಕಲ್ಯಾಣದಲ್ಲಿ ಆಯೋಜಿಸಿದ ಪೂರ್ವಭಾವಿ ಸಭೆಯನ್ನು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಸಂಜುಕುಮಾರ ಸುಗೂರೆ, ಸೋಮಶೇಖರ ಮೂಲಗೆ, ರೇವಣಸಿದ್ದಪ್ಪ ಸುಗೂರೆ, ಅಜಯಕುಮಾರ ದಂಡೆ, ರಾಜಕುಮಾರ ತರಿ, ಶಿವಶಂಕರ ಬಚ್ಚಣೆ, ಅರುಣಕುಮಾರ ಗುದಗೆ ಇದ್ದರು. 
ಜಿಲ್ಲೆ

ಮೀಸಲಾತಿಗಾಗಿ ಬೃಹತ್ ಸಮಾವೇಶ ಮೇ ೧೮ಕ್ಕೆ

ರಾಜು ಯಮಕನಮರಡಿ

ಬಸವಕಲ್ಯಾಣ: ಜಗತ್ತಿಗೆ ಸಾಮಾಜಿಕ ನ್ಯಾಯ ನೀಡಿದ ನೆಲ ಕಲ್ಯಾಣದಲ್ಲಿ ಮೇ ೧೮ರಂದು ಲಿಂಗಾಯತ ದೀಕ್ಷಾ ಪಂಚಮಸಾಲಿ ೨ಎ ಮತ್ತು ಒಬಿಸಿ ಮೀಸಲಾತಿ ಒತ್ತಾಯಿಸಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಕಟಿಸಿದರು.

ನಗರದ ಬಿರಾದಾರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಸಿದ್ಧಗಂಗಾ ಶ್ರೀ ಜಯಂತ್ಯುತ್ಸವ ಹಾಗೂ ಲಿಂಗಾಯತ ದೀಕ್ಷಾ ಪಂಚಮಸಾಲಿ ೨ಎ ಮತ್ತು ಒಬಿಸಿ ಮೀಸಲಾತಿ ಒತ್ತಾಯಿಸಿ ಪ್ರತಿಜ್ಞಾ ಕ್ರಾಂತಿ ಅಭಿಯಾನದ ನಿಮಿತ್ತ ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಪ್ರಮುಖರ ಪೂರ್ವಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿಗಾಗಿ ಈಗಾಗಲೇ ೭ ಹಂತದ ಹೋರಾಟ ನಡೆಸಲಾಗಿದೆ. ೮ನೇ ಹಂತದ ಹೋರಾಟಕ್ಕೆ ಕಲ್ಯಾಣದಲ್ಲಿ ಚಾಲನೆ ನೀಡಲಾಗುತ್ತಿದ್ದು, ಬೃಹತ್ ಸಮಾವೇಶ ನಡೆಸುವ ಮೂಲಕ ಸರ್ಕಾರದ ಕಣ್ಣು ತರೆಸಲು ಪ್ರಯತ್ನಿಸಲಾಗುವುದು. ಸಮಾವೇಶಕ್ಕೂ ಮುನ್ನ ಮೇ ೫ರಿಂದ ಪ್ರತಿ ದಿನ ಹಳ್ಳಿಗಳಿಗಳಿಗೆ ತೆರಳಿ ಮೀಸಲಾತಿಯ ಅಗತ್ಯತೆ, ಹೋರಾಟದ ಅನಿವಾರ್ಯ, ಸರ್ಕಾರದ ಧೋರಣೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಇದಕ್ಕಾಗಿ ಎರಡು ವಾರ ಬಸವಕಲ್ಯಾಣದಲ್ಲಿಯೇ ಇರುವುದಾಗಿ ಹೇಳಿದರು.

ನಮ್ಮ ಹೋರಾಟ ಯಾವುದೇ ವ್ಯಕ್ತಿ, ಜಾತಿ, ಪಕ್ಷದ ವಿರುದ್ಧವಲ್ಲ. ಸಮಾಜಪ ಹೋರಾಟ ನಮ್ಮದು. ಅನ್ಯಾಯ ಮಾಡುವ ಸರ್ಕಾರವನ್ನು ಎಚ್ಚರಿಸುವದೇ ಹೋರಾಟದ ಮುಖ್ಯ ಉದ್ದೇಶ. ಹಿಂದೆಯೂ ಹೋರಾಟ ಮಾಡಿದ್ದೇವೆ. ಈಗಲು ಮಾಡುತ್ತಿದ್ದೇವೆ. ಮುಂದೇ ಯಾರ ಸರ್ಕಾರ ಬಂದರೂ ಮಾಡುತ್ತೇನೆ. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟ ಪಡಿಸಿದರು.

೧೨ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಶರಣರು ಹೋರಾಟ ಮಾಡಿದರು. ವಿಶ್ವಕ್ಕೆ ಸಾಮಾಜಿಕ ನ್ಯಾಯ ಕೊಟ್ಟ ಬಸವಣ್ಣನವರ ಪರಂಪರೆಯ ನಾವು ಇಂದೂ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸಮಾಜದ ಪ್ರಗತಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅವಶ್ಯಕ. ಹೋರಾಟ ಮಾಡಿ ನ್ಯಾಯ ಪಡೆಯಬೇಕು ಎನ್ನುವುದೂ ಈಗ ತಾವು ಇಲ್ಲಿ ಬಂದಿರುವ ಮುಖ್ಯ ಉದ್ದೇಶ, ಸಂಜುಕುಮಾರ ಸುಗರೆ ಅವರು ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ನಂತರ ಸಂಘಟನೆಗೆ ಬಲ ಬಂದಿದೆ. ಅಭಿಯಾನ ಮತ್ತು ಸಮಾವೇಶಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಮಹಾರಾಷ್ಟçದಲ್ಲಿ ಮರಾಠಾ, ಗುಜರಾತ್‌ನಲ್ಲಿ ಪಟೇಲ್, ರಾಜಸ್ಥಾನದಲ್ಲಿ ಗುಜ್ಜರ್, ಹರಿಯಾಣಾದಲ್ಲಿ ಜಾಟ್ ಸಮಾಜ, ಸಮುದಾಯದವರು ಹೋರಾಟ ಮಾಡಿ ಮೀಸಲಾತಿ ಪಡೆದಿದ್ದಾರೆ. ಕರ್ನಾಟಕದಲ್ಲಿ ನಾವು ಒಗ್ಗಟ್ಟಾಗಿ, ಒಂದಾಗಿ ಹೋರಾಟ ಮಾಡಿ ಮೀಸಲಾತಿ ಪಡೆಯಬೇಕಿದೆ. ಇದಕ್ಕಾಗಿ ಎಲ್ಲರ ಸಹಕಾರ ಬೇಕು ಎಂದರು.

ಹಿಂದೆ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿಯೂ ಹೋರಾಟ ಮಾಡಿದ್ದು, ಈಗಿನ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಹೋರಾಟ ಮಾಡಿದ್ದೇವೆ. ಮೀಸಲಾತಿ ಕೇಳಿದರೆ ಲಾಟಿ ಏಟು ಕೊಟ್ಟರೂ ಮನೆಯಲ್ಲಿ ಕುಳಿತಿಲ್ಲ. ಈಗ ಮತ್ತೆ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದರು. ಮೀಸಲಾತಿ ಕೊಡಲು ಆಗುವದಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಸ್ವಾಭಿಮಾನ ಬಿಟ್ಟು ಮತ್ತೆ ಅವರಲ್ಲಿ ಹೋಗುವ ಬದಲು ಹೋರಾಟಕ್ಕೆ ಅಣಿ ಆಗಿದ್ದೇವೆ ಎಂದರು.

ಪಂಚ ಸೇನಾ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಸಂಜುಕುಮಾರ ಸುಗೂರೆ, ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಸುಗೂರೆ, ಕಲಬುರಗಿ ಜಿಲ್ಲಾಧ್ಯಕ್ಷ ಸೋಮಶೇಖರ ಮೂಲಗೆ ಮಾತನಾಡಿದರು. ರಾಜಕುಮಾರ ತರಿ, ಅಜಯಕುಮಾರ ದಂಡೆ, ಶಿವಶಂಕರ ಬಚ್ಚಣೆ, ಅರುಣಕುಮಾರ ಗುದಗೆ ಇದ್ದರು. ಶಿವರಾಜ ವೀರಣ್ಣನೋರ್ ಸ್ವಾಗತಿಸಿದರು.

ಬಸನಗೌಡ ಪಾಟೀಲ್‌ಗೆ ಅನ್ಯಾಯ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಅವರಿಗೆ ಅನ್ಯಾಯವಾಗಿದೆ. ನಮ್ಮ ಹೋರಾಟದಲ್ಲಿ ಪಾಟೀಲ್ ಸಕ್ರಿಯವಾಗಿ ಭಾಗವಹಿಸಿದ್ದಾರೆ. ನಮ್ಮೊಂದಿಗೆ ಹೋರಾಟದಲ್ಲಿ ಕೈಜೋಡಿಸಿದರವರಿಗೆ ಅನ್ಯಾಯವಾದರೆ ಸಹಿಸಲಾಗದು ಎಂದು ಎಚ್ಚರಿಸಿದ ಅವರು, ಕಲ್ಯಾಣದಲ್ಲಿ ನಡೆಯುವ ಸಮಾವೇಶಕ್ಕೆ ಅವರನ್ನು ಆಹ್ವಾನಿಸಲಾಗುವುದು ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸಮಾಜಕ್ಕಾಗಿ ನ್ಯಾಯ ಕಲ್ಪಿಸಲು ಪೂಜ್ಯರು ಹೋರಾಟ ನಡೆಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ತನು, ಮನ, ಧನದಿಂದ ಸಹಕರಿಸಲಾಗುವುದು.

| ಸಂಜುಕುಮಾರ ಸುಗೂರೆ,  ಪಂಚ ಸೇನಾ ಕಲ್ಯಾಣ ಕರ್ನಾಟಕ ವಿಭಾಗ ಅಧ್ಯಕ್ಷ