ಬಾಗಲಕೋಟೆ: ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ೨ ಎ ಮೀಸಲಾತಿ ಹೋರಾಟ ಮಾಡಿದರು. ಪಾದಯಾತ್ರೆಯಲ್ಲಿ ನಾವು ಕೂಡಾ ಭಾಗವಹಿಸಿದ್ದೇವು. ಅದರ -Àಲವಾಗಿ ೨ಸಿ, ೨ಡಿ ಸಿಕ್ಕಿತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೊಳಿಸಲಿಲ್ಲ ಎಂದು ವಿ.ಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಮತ್ತೆ ಹೋರಾಟ ಆರಂಭಗೊಳಿಸಿದಾಗ ಕಾಂಗ್ರೆಸ್ ಪಂಚಮಸಾಲಿ ನಾಯಕರು ಕೈ ಜೋಡಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಸ್ಪಂದಿಸದ ಕಾರಣ ಬೆಳಗಾವಿಯಲ್ಲಿ ಹೋರಾಟ ಮಾಡುವಾಗ ಲಾಠಿ ಮಾಡಿಸಿ ಉರುಳಾಡಿಸಿ ಹೊಡೆದರು. ಇದೆಲ್ಲವನ್ನು ಸ್ವಾಮೀಜಿ ಮೇಲೆ ಹಾಕಿ ಒಂದು ಪಕ್ಷದ ಪರ ಅಂತ ಬಿಂಬಿಸುವ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಪೀಠದಿಂದ ತೆಗೆಯುವ ಬಗ್ಗೆ ಮಾತನಾಡೋದು, ಪೀಠಕ್ಕೆ ಕೀಲಿ ಹಾಕುವ ಕೆಲಸ ಮಾಡೋದು ಸರಿಯಲ್ಲ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಅಂತ ಬಸವಣ್ಣ ಹೇಳಿದ್ದಾರೆ. ಶ್ರೀಗಳು ಸ್ಥಾವರಕ್ಕೆ ಬೆಲೆ ಕೊಡುವದಿಲ್ಲ. ಜಂಗಮವಾಗಿ ಓಡಾಡಿದವರು. ಮಠದ ಬಗ್ಗೆ ಪ್ರೀತಿ, ವ್ಯಾಮೋಹವಿಲ್ಲ. ಪೀಠದಲ್ಲಿ ಅನೈತಿಕ ಚಟುವಟಿಕೆ ಅಂತ ಹೇಳುವುದು ತಪ್ಪು. ಅವರ ಬಗ್ಗೆ ಈ ರೀತಿ ಹೇಳಿಕೆ ಕೊಡುವುದು ಶೋಭೆ ತರುವದಿಲ್ಲ ಎಂದು ವಿಜಯಾನಂದ ಕಾಶಪ್ಪನವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪೀಠಕ್ಕೆ ಪರ್ಯಾಯ ಸ್ವಾಮೀಜಿ ಎಂಬ ಕಾಶಪ್ಪನವರ ಹೇಳಿಕೆ ವಿಚಾರ, ಸ್ವಾಮೀಜಿ ಜನರ ಮನಸ್ಸಿನಲ್ಲಿ ಇದ್ದಾರೆ. ಈ ಬಗ್ಗೆ ನಾವು ಸಮಾಜದದ ಮುಖಂಡರು ಜೊತೆ ಚರ್ಚೆ ಮಾಡುತ್ತೇವೆ. ಚರ್ಚೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಮೀಸಲಾತಿ ಹೋರಾಟ ಮಾತ್ರ ನಿಲ್ಲುವದಿಲ್ಲ ಎಂದು ಘೋಷಣೆ ಮಾಡಿದರು.