ಹಾಸನ : ಶತಮಾನಗಳ ಹಿಂದಿನಿಂದಲೂ ನಡೆಯುತ್ತಿದ್ದ ಪ.ಜಾತಿ, ಪ. ಪಂಗಡಗಳ ಸಮುದಾಯದ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಬಿಜೆಪಿ ಪಕ್ಷದಿಂದ ನ್ಯಾಯ ದೊರೆತಿದೆ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಜನ್ಮ ತಾಳದೆ ಇದ್ದರೆ ಇಂದು ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮಾಹಿತಿಯೇ ಇರುತ್ತಿರಲಿಲ್ಲ, ಪ್ರಪಂಚಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ರಾಮಾಯಣ ಮಹಾ ಕಾವ್ಯ ರಚಿಸಿ ಪ್ರಪಂಚಕ್ಕೆ ಮಾದರಿಯಾಗಿರುವ ವಾಲ್ಮೀಕಿ ಶ್ರೀಗಳ ಕೊಡುಗೆ ಅಪಾರ ಎಂದು ತಿಳಿಸಿದರು.
ಭಾರತ ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದಾಗಿನಿಂದ ರಾಜ್ಯಪಾಲರು, ಹಾಗೂ ರಾಷ್ಟ್ರಪತಿಯಂತಹ ಉನ್ನತ ಸ್ಥಾನಗಳನ್ನು ಪ. ಜಾತಿ, ಪ.ಪಂಗಡಗಳಿಗೆ ನೀಡಿರುವುದು ಅವರ ಸಮಾನತಾ ತತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ , ಮನುಷ್ಯ ಭ್ರಾತೃತ್ವದಿಂದ ಬಾಳಲು ನಾಗರೀಕತೆ ಮುಖ್ಯ ಅದನ್ನು ಸಾರುವ ವಾಲ್ಮೀಕಿಗಳ ಮಹಾಕಾವ್ಯ ಮನುಜನಲ್ಲಿ ಮೃಗತ್ವವನ್ನು ತೊಡೆದು ಹಾಕಿ ಉತ್ತಮ ತತ್ವವನ್ನು ಸಾರುತ್ತಿದೆ. ಮುಂದಿನ ಪ್ರತಿಯೊಂದು ಪೀಳಿಗೆಯೂ ರಾಮಾಯಣ, ಮಹಾಭಾರತ ಕಾವ್ಯಗಳನ್ನು ಅಭ್ಯಾಸ ಮಾಡಿ ನಾಗರೀಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್. ಎಲ್ ಮಲ್ಲೇಶ್ ಗೌಡ ಮಾತನಾಡಿ, ಇಡೀ ಭಾರತದ ಇತಿಹಾಸದಲ್ಲಿ ವಿಶ್ವಕ್ಕೆ ಮಾದರಿಯಾಗುರುವ ಶ್ರೇಷ್ಟ ಕಾವ್ಯವನ್ನು ರಚಿಸಿರುವ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ, ರಾಮಾಯಣ ಮಹಾಕಾವ್ಯ ಪ್ರತಿಯೊಬ್ಬರ ಬದುಕಿಗೆ ಮಾದರಿ ಯಾಗಿದೇ ಎಂದರು.
ಜಗತ್ತಿಗೆ ವಾಲ್ಮೀಕಿ ಮಹರ್ಷಿ ನೀಡಿರುವ ಕೊಡುಗೆ ಅಪಾರ, ವಿದ್ಯೆ ಜೊತೆಗೆ ವಿವೇಚನೆ ಮುಖ್ಯ ಎಂಬುದನ್ನು ಸಮಾಜಕ್ಕೆ ತಿಳಿಸಿಕೊಡುವ ಮೂಲಕ, ಉತ್ತಮ ಸಂಸ್ಕೃತಿ ಮೌಲ್ಯಗಳ ಪರಿಚಯಿಸಿ ಮನುಕುಲಕ್ಕೆ ಮಾನವೀಯ ಸಂದೇಶ ರವಾನಿಸಿದರು. ಸಂಸ್ಕಾರ ಹುಟ್ಟಿನ ಮೂಲದಿಂದ ಬರುವುದಿಲ್ಲ, ವಿದ್ಯಾರ್ಜನೆ, ಸ್ವ ಅರ್ಜನೆಯಿಂದ ಬರುತ್ತದೆ ಆದುದರಿಂದ ವಿದ್ಯೆಯ ಜೊತೆಗೆ ವಿವೇಚನೆಯನ್ನು ಅಳವಡಿಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಿ ಬದುಕುವಂತೆ ಕರೆ ನೀಡಿದರು.
ಮುಂದೆ ಸಾಗುವ ದಾರಿ ಯಾವಾಗಲು ಸ್ಪಷ್ಟವಾಗಿರಬೇಕು ಹಾಗಾಗಿ ನಾವು ಇಂತಹ ಆದರ್ಶ ವ್ಯಕ್ತಿಗಳ ತತ್ವಗಳನ್ನು ಪಾಲಿಸುವುದು ಬಹಳ ಮುಖ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ ತಮ್ಮಯ್ಯ, ವಾಲ್ಮೀಕಿ ಸಮುದಾಯದ ಮುಖಂಡ ಜಿ.ಓ ಮಂತಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ದಸಂಸ ಮುಖಂಡ ಎಚ್.ಕೆ ಸಂದೇಶ್ ಇತರರು ಇದ್ದರು.