ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಯೋಗಾರಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಅರಕಲಗೂಡು ತಾಲೂಕು ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಭ್ರಮಾಚರಿಸಿದರು. 
ಜಿಲ್ಲೆ

ಮೀಸಲಾತಿ ಹೆಚ್ಚಳ ಸ್ವಾಗತಾರ್ಹ ಕ್ರಮ

ಅರಕಲಗೂಡು: ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಯೋಗಾರಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಾ ರಮೇಶ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಈ ಸಮುದಾಯಗಳಿಗೆ ಮೀಸಲಾತಿ ಏರಿಕೆ ಮಾಡುವಂತೆ ಸ್ವಾಮೀಜಿಗಳು ಹಿಂದಿನ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಜಾರಿಯಾಗಿರಲಿಲ್ಲ. ಬಿಜೆಪಿ ಸರ್ಕಾರ ತಳ ಸಮುದಾಯದ ಜನರ ಆಶೋತ್ತರಗಳನ್ನು ಈಡೇರಿಸಿದೆ ಎಂದು ಹೇಳಿದರು.

ಶಿಕ್ಷಣ ಉದ್ಯೋಗ ಪಡೆದು ಅರ್ಥಿಕವಾಗಿ ಸಬಲರಾಗಲು ಮೀಸಲಾತಿ ಹೆಚ್ಚಳ ಈ ಸಮುದಾಯಗಳಿಗೆ ಸಹಕಾರಿಯಾಗಿದೆ. ಬಿಜೆಪಿ ಸರ್ವ ಜನಾಂಗಕ್ಕೂ ಶಿಕ್ಷಣ, ಉದ್ಯೋಗ ಎಲ್ಲದರಲ್ಲೂ ಆದ್ಯತೆ ನೀಡುತ್ತಿದೆ. ಮೀಸಲಾತಿ ತೀರ್ಮಾನ ತೆಗೆದುಕೊಂಡ ಸಿಎಂ, ಸಂಪುಟದ ಸದಸ್ಯರಿಗೆ ಧನ್ಯವಾದ ತಿಳಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದವರಿಗೆ ಅಧಿಕಾರ ನೀಡಲಿಲ್ಲ. ಜಿ.ಪರಮೇಶ್ವರ್ ಅವರನ್ನು ಮಂತ್ರಿ ಸ್ಥಾನದಿಂದ ಹೊರಗಿಟ್ಟರು. ಮುನಿಯಪ್ಪ ಅವರನ್ನು ಸೋಲಿಸಿದರು. ಕಾಂಗ್ರೆಸ್ ದಲಿತರ ಪರವಾಗಿರಲಿಲ್ಲ. ಬದಲಾಗಿ ಮತ ಬ್ಯಾಂಕ್ ಆಗಿ ಬಳಸುತ್ತಿತ್ತು ಎಂದರು.