ಜಿಲ್ಲೆ

ಮೀಸಲಾತಿ ಹೆಚ್ಚಳ ವಿಜಯೋತ್ಸವ

ಬೀದರ್: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆಯಲ್ಲಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು.

ಪರಿಶಿಷ್ಟ ಜಾತಿ ಮೀಸಲು ಶೇ.15ರಿಂದ 17 ಹಾಗೂ ಪರಿಶಿಷ್ಟ ಪಂಗಡ ಮೀಸಲು ಶೇ.3ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನಿಸಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೋಷಿತರ ಬಗ್ಗೆ ಹೊಂದಿದ ಕಾಳಜಿಗೆ ಸಾಕ್ಷಿಯಾಗಿದೆ. ಇದೊಂದು ಐತಿಹಾಸಿಕ ತೀರ್ಮಾನ. ಬರೀ ವೋಟ್ ಬ್ಯಾಂಕ್ ಆಗಿ ಬಳಸುತ್ತಿರುವವರ ಬಗ್ಗೆ ಪರಿಶಿಷ್ಟರು ಎಚ್ಚತ್ತುಕೊಳ್ಳಬೇಕು. ಎಲ್ಲರ ವಿಕಾಸವೇ ಬಿಜೆಪಿ ಸಂಕಲ್ಪವಿದೆ ಎಂದು ನಾಗಮಾರಪಳ್ಳಿ ಹೇಳಿದರು.

ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಪ್ರಮುಖರಾದ ವೈಜನಾಥ ಕಮಾಠಾಣೆ, ಮಹೇಶ ಪಾಲಂ, ಗಣೇಶ ಭೋಸ್ಲೆ, ಸಂಜಯ, ನಿತೀನ್, ಬಿರುಸಿಂಗ್ ಇತರರು ಪಾಲ್ಗೊಂಡಿದ್ದರು.