ಜಿಲ್ಲೆ

ಮೀಸಲಾತಿ ವಿರೋಧಿ ಹೇಳಿಕೆಗೆ ಖಂಡನೆ

Chitradurga - Desk - Pranav Kumar

ಚಿತ್ರದುರ್ಗ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್ಸಿ-ಎಸ್ಟಿ ಮೀಸಲಾತಿ ರದ್ದುಪಡಿಸುವುದಾಗಿ ವಿಪಕ್ಷ ನಾಯಕ ರಾಹುಲ್‌ಗಾಂಧಿ ವಿದೇಶದಲ್ಲಿ ನೀಡಿರುವ ಹೇಳಿಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಹುಲ್‌ಗಾಂಧಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೇಳಿಕೆ ಸಂಬಂಧ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್ ಸಿದ್ದಾಪುರ ಮಾತನಾಡಿ, ರಾಹುಲ್‌ಗಾಂಧಿ ಹೇಳಿಕೆಯಿಂದ ಸಂವಿಧಾನದ ಭರವಸೆಯ ಮೀಸಲಾತಿ ಅಪಾಯದಲ್ಲಿದೆ. ದಲಿತರು, ಶೋಷಿತರು, ಹಿಂದುಳಿದವರ ಕುರಿತು ಕಾಂಗ್ರೆಸ್ಸಿಗರಿಗೆ ಕಾಳಜಿ ಇಲ್ಲವೆಂಬುದಕ್ಕೆ ಇದು ಉತ್ತಮ ನಿದರ್ಶನ ಎಂದು ಕಿಡಿಕಾರಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಧಾನಿಯಾಗಿ ದೇಶ ಮುನ್ನಡೆಸುವ ಎಲ್ಲ ಅರ್ಹತೆ ಹೊಂದಿದ್ದರು. ಆದರೆ, ಅವರನ್ನು ಎರಡು ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿದ್ದು, ಕಾಂಗ್ರೆಸ್. ಅವರ ಅಂತ್ಯಕ್ರಿಯೆಗೂ ಜಾಗ ಕೊಡಲಿಲ್ಲ. ಹೀಗಾಗಿ ಮೊದಲಿನಿಂದಲೂ ದಲಿತ ವಿರೋಧಿ ಪಕ್ಷವಾಗಿದೆ ಎಂದು ದೂರಿದರು.

ಎಸ್ಸಿ-ಎಸ್ಟಿ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಬಳಕೆಯಾಗಬೇಕಿದ್ದ 25 ಸಾವಿರ ಕೋಟಿ ರೂ. ಅನುದಾನ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಇನ್ನೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ದೋಚಲಾಗಿದೆ. ಪರಿಶಿಷ್ಟ ಸಮುದಾಯಗಳ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ನಗರಸಭೆ ಸದಸ್ಯ ಎಚ್.ಶ್ರೀನಿವಾಸ್ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರೆಗೂ ಮೀಸಲಾತಿ ರದ್ದುಗೊಳಿಸಲು ಸಾಧ್ಯವಿಲ್ಲ. ರಾಹುಲ್‌ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಹಗಲು ಕನಸು ಕಾಣುತ್ತಿದ್ದಾರೆ. ಇದು ಸಾಧ್ಯವಾಗದ ಮಾತು ಎಂದರು.

ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯದವರ ಕುರಿತು ಬಾಯಿ ಮಾತಿನಲ್ಲಿ ಕಾಳಜಿ ತೋರುವ ಕಾಂಗ್ರೆಸ್ ನಾಯಕರ ನಿಜ ಬಣ್ಣ ಈ ಹೇಳಿಕೆಯಿಂದ ಬಯಲಾಗಿದೆ. ಇದರಿಂದ ಜನ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ಮುಖಂಡರಾದ ನವೀನ್ ಚಾಲುಕ್ಯ, ಕಲ್ಲೇಶಯ್ಯ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಮಾಧುರಿ ಗಿರೀಶ್, ಭಾರ್ಗವಿ ದ್ರಾವಿಡ್, ಶಿವಣ್ಣಾಚಾರ್, ಛಲವಾದಿ ತಿಪ್ಪೇಸ್ವಾಮಿ, ಮಂಜು, ಕೃಷ್ಣ, ಪ್ರಕಾಶ್, ಬಸವೇಶ್, ಶಂಭು, ಪಲ್ಲವಿ ಪ್ರಸನ್ನ, ಶ್ರೀರಾಮು, ಶೈಲಜಾರೆಡ್ಡಿ, ಶ್ಯಾಮಲಾ, ನಗರಸಭೆ ಸದಸ್ಯ ಹರೀಶ್ ಇತರರಿದ್ದರು.