ಚಾಮರಾಜನಗರ: ಕಳೆದ 40 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಮೀಸಲಾತಿ ವಿರೋಧಿ ನೀತಿಯ ಮೂಲಕ ರಾಜ್ಯದಲ್ಲಿರುವ ಹಿಂದುಳಿದ ಜಾತಿಗಳಿಗೆ ಭಾರಿ ಅನ್ಯಾಯ ಮಾಡಿವೆ ಎಂದು ಸಮಾಜವಾದಿ ಜನತಾ ಪಾರ್ಟಿಯ ರಾಜ್ಯ ಘಟಕ ಅಧ್ಯಕ್ಷ ಜಿ.ಎಂ. ಗಾಡ್ಕರ್ ಆರೋಪಿಸಿದರು.
ನ್ಯಾ.ಚಿನ್ನಪ್ಪರೆಡ್ಡಿ ಆಯೋಗವು ಸಾಮಾಜಿಕ, ಶೈಕ್ಷಣಿಕವಾಗಿ ಅತಿ ಹಿಂದುಳಿದ 52 ಜಾತಿ ಹಾಗೂ ಉಪ ಜಾತಿಗಳನ್ನು ಅತಿ ಹಿಂದುಳಿದ ಜಾತಿ ಪಟ್ಟಿಯಲ್ಲಿ ಸೇರಿಸಿ ಜನಸಂಖ್ಯೆಯನ್ನು ಪರಿಗಣಿಸಿ ಶೇ.7ರಷ್ಟು ಮೀಸಲಾತಿಯನ್ನು ನೀಡುವಂತೆ ವರದಿ ಸಲ್ಲಿಸಿತ್ತು. ಅದರಂತೆ 1994 ರಲ್ಲಿ ಸರ್ಕಾರವು ಆಯೋಗದ ವರದಿಯನ್ನು ಜಾರಿ ಮಾಡಿತು. ಆ ಸಂದರ್ಭದಲ್ಲಿ ಒತ್ತಡಕ್ಕೆ ಮಣಿದು ಸರ್ಕಾರವು ಕೆಲ ಜಾತಿಗಳನ್ನು ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆ ಮಾಡಿತು. ಅತಿ ಹಿಂದುಳಿದ ಜಾತಿಗಳ ಅರ್ಹತೆ ಹೊಂದಿದ್ದ 243 ಜಾತಿಗಳು, ಉಪಜಾತಿಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಯಿತು. ಅತಿ ಹಿಂದುಳಿದ ಜಾತಿಗಳ ಸ್ಥಾನ ಪಡೆದ 95 ಜಾತಿಗಳು, ಉಪ ಜಾತಿಗಳು ಸೇರಿ ಒಟ್ಟು 285 ಜಾತಿಗಳಾಗಿವೆ. ಇದರಿಂದ ಜನಸಂಖ್ಯೆ ದ್ವಿಗುಣವಾಗುತ್ತದೆ ಎಂದರು.
ಸರ್ಕಾರವು ಸುಪ್ರೀಂಕೋರ್ಟ್ ಆದೇಶದ ಗರಿಷ್ಠ ಮಿತಿ ಮೀರಿ ಶೇ. 73ರಷ್ಟು ಮೀಸಲಾತಿ ನೀಡಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಸುಪ್ರೀಂಕೋರ್ಟ್ ಶೇ.50 ಕ್ಕೆ ಇಳಿಸಲು ಆದೇಶಿಸಿತು. ಇದರಿಂದಾಗಿ ಸರ್ಕಾರವು ಮೀಸಲಾತಿ ಕೋಟಾವನ್ನು ಶೇ.50 ರಷ್ಟು ಇಳಿಸಿತು. ಈ ಸಂದರ್ಭದಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ನೀಡಿದ್ದ ಶೇ.7 ರಷ್ಟು ಮೀಸಲಾತಿಯನ್ನು ಶೇ.4 ಕ್ಕೆ ಇಳಿಸಿತು. ಆ ಮೂಲಕ ಸರ್ಕಾರವು ಅತಿ ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಿತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅತಿ ಹಿಂದುಳಿದ ಜಾತಿಗಳಿಗೆ ಶೇ.10 ರಷ್ಟು, ಹಿಂದುಳಿದ ಜಾತಿಗಳಿಗೆ ಶೇ.20 ರಷ್ಟು, ಅಲ್ಪಸಂಖ್ಯಾತರಿಗೆ ಶೇ.10 ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು. ರಾಜ್ಯದಲ್ಲಿರುವ ಎಲ್ಲ ಸಮುದಾಯದವರಿಗೂ ಜನಸಂಖ್ಯೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಮಾಡದೆ ಮೀಸಲಾತಿ ಏರಿಕೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಜನಪರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಂಗಾರಸ್ವಾಮಿ, ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಮುಖಂಡರಾದ ಚಂದ್ರಶೇಖರ್, ಚಾ.ಹ. ರಾಮು ಇದ್ದರು.