ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜಶೇಖರ ತಳವಾರ ಮಾತನಾಡಿದರು. ಸಂಜಯ ನಾಯಕ, ಅಶೋಕ ನಾಯಕ, ಬಸವರಾಜ ದೊಡಮನಿ ಇದ್ದರು. 
ಜಿಲ್ಲೆ

ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಹಿಂದೇಟು

ಬೆಳಗಾವಿ: ವಾಲ್ಮೀಕಿ ಸಮುದಾಯ ಸೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೊಡುವಲ್ಲಿ ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ. ಹೀಗಾಗಿ ಅ.9ರಂದು ಜರುಗಲಿರುವ ವಾಲ್ಮೀಕಿ ಜಯಂತಿಗೆ ಬಹಿಷ್ಕಾರ ಹಾಕಲಾಗುತ್ತಿದೆ ಎಂದು ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆ ಒಕ್ಕೂಟ, ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಮುಖಂಡ ರಾಜಶೇಖರ ತಳವಾರ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ನಾಗಮೋಹನ ದಾಸ ವರದಿಯನ್ನು ಸರ್ಕಾರ ಜಾರಿಗೆ ತರಲು ಹಿಂದೇಟು ಹಾಕುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿನ ಮೀಸಲಾತಿ ನೀಡಲು ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ವ ಪಕ್ಷಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ನೆಪ ಹೇಳಿ ದಿನ ಕಳೆಯುತ್ತಿದೆ ಎಂದು ದೂರಿದರು.

ವಾಲ್ಮೀಕಿ ಪೀಠದ ಸ್ವಾಮೀಜಿ ಪ್ರಸನ್ನಾನಂದ ಅವರು 200 ದಿನಗಳಿಂದ ವಾಲ್ಮೀಕಿ ಸಮುದಾಯ ಸೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿನ ಮೀಸಲಾತಿ ನೀಡಬೇಕೆಂದು ಧರಣಿ ನಡೆಸಿದ್ದಾರೆ. ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಸಚಿವರು ಮೀಸಲಾತಿ ನೀಡುವ ಭರವಸೆ ನೀಡುತ್ತಿದ್ದಾರೆ ವಿನಃ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಜಯ ನಾಯಕ, ಅಶೋಕ ನಾಯಕ, ಬಸವರಾಜ ದೊಡಮನಿ ಇದ್ದರು.