ಮಳವಳ್ಳಿ: ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಬಿಜೆಪಿಯವರು ಖಾಸಗೀಕರಣ ಮಾಡುತ್ತಿರುವ ಮೂಲ ಉದ್ದೇಶ ಮೀಸಲಾತಿ ತೆಗೆಯುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.
ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರ್ ಹಿಂದುಳಿದವರ ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅವರು ನೀಡಿದ ಸಂವಿಧಾನದಲ್ಲಿನ ಮೀಸಲಾತಿ ಭಿಕ್ಷೆಯಿಂದ ದಲಿತರು ಹಿಂದುಳಿದ ಸಮುದಾಯ ಪ್ರಸ್ತುತ ಸಮಾಜದಲ್ಲಿ ಆರ್ಥಿಕ ಮತ್ತು ಉದ್ಯೋಗಾವಕಾಶದಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯವಾಗಿದೆ. ಅದರಲ್ಲಿ ನಾನೂ ಒಬ್ಬ ಫಲಾನುಭವಿ. ಈ ಕ್ಷೇತ್ರದಲ್ಲಿ ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿರುವುದೇ ಮೀಸಲು ಕ್ಷೇತ್ರದ ಪರಿಕಲ್ಪನೆಯಿಂದ ಎಂದರು.
ಪಟ್ಟಣದಲ್ಲೂ ಇತ್ತೀಚೆಗೆ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಪ್ರತಿ ಗ್ರಾಮಗಳಲ್ಲೂ ಅಂಬೇಡ್ಕರ್ ಪುತ್ಥಳಿಗಳು ಅನಾವರಣಗೊಳ್ಳುತ್ತಿವೆ. ಇದೊಂದು ಉತ್ತಮ ಬೆಳವಣಿಗೆ. ಪುತ್ಥಳಿ ನಿರ್ಮಾಣದ ಮೂಲ ಉದ್ದೇಶ ಬಾಬಾಸಾಹೇಬರ ಆದರ್ಶಗಳನ್ನು ಪಾಲನೆ ಮಾಡಿ ಯುವ ಪೀಳಿಗೆ ಜಾಗೃತಗೊಳ್ಳಬೇಕಿದೆ ಎಂದರು.
ಜಿಪಂ ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್, ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ, ಗ್ರಾಮದ ಮುಖಂಡರಾದ ಪುಟ್ಟುಬುದ್ದಿ, ನಂಜುಂಡಸ್ವಾಮಿ, ರಾವಳಯ್ಯ, ಸಿದ್ದರಾಜು, ಪ್ರಕಾಶ್, ಚಂದ್ರಶೇಖರ ಇತರರಿದ್ದರು.