ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನಗರದ ಚಿಕ್ಕಕೆರೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಮೀನುಗಾರಿಕೆ ಕೈಗೊಳ್ಳಲು ಈ ಕೆರೆಗೆ ಕಾಯಕಲ್ಪ ನೀಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದ ಚಿಕ್ಕಕೆರೆಯ ಸ್ವಚ್ಛತಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಚಿಕ್ಕಕೆರೆ ಹಾಗೂ ದೊಡ್ಡ ಕೆರೆ ಅಭಿವೃದ್ಧಿಗೆ ನೀರಾವರಿ ಇಲಾಖೆಯಿಂದ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಕೆರೆಯಲ್ಲಿ ಜೋಂಡು ತುಂಬಿದ್ದು, ಮೀನುಗಾರಿಕೆಗೆ ತೊಡಕಾಗಿದೆ. ತಾಲೂಕಿನ ಮೀನುಗಾರರ ಸಂಘದ ಮುಖಂಡರು ಕೆರೆ ಸ್ವಚ್ಛತೆ ಬಗ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಕೆರೆಗೆ ಮೂರು ಕಡೆ ಕೋಡಿ ಬೀಳುತ್ತದೆ, ಕೆರೆ ಕೋಡಿಗಳನ್ನು ದುರಸ್ತಿಪಡಿಸಲಾಗುವುದು.
ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಟೆಂಡರ್ ಕರೆದು ಕೂಡಲೇ ಕಾಮಗಾರಿ ಆರಂಭಿಸುವಂತೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು. ಈ ಬಾರಿ ಉತ್ತಮ ಮಳೆಯಿಂದಾಗಿ ಕೆರೆಗಳೆಲ್ಲ ತುಂಬಿವೆ, ರೈತಾಪಿ ಜನರಿಗೆ ಬಹಳ ಸಹಕಾರಿಯಾಗಿದೆ, ಹಾಗೆಯೇ ನಗರದಲ್ಲಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ, ಪ್ರತೀ ವರ್ಷ ಇದೇ ರೀತಿ ವರುಣ ದೇವ ಕೃಪೆ ತೋರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ದೊಡ್ಡಕೆರೆ ಬಳಿ ಪಾರ್ಕ್: ದೊಡ್ಡಕೆರೆಯಲ್ಲಿ ಹಾದುಹೋಗಿರುವ ರಸ್ತೆ ಅಭಿವೃದ್ಧಿ ಜತೆಗೆ ಸುಂದರ ಉದ್ಯಾನ ನಿರ್ಮಾಣ ಮಾಡುವ ಚಿಂತನೆ ಇದೆ, ಸಾರ್ವಜನಿಕರಿಗೆ ವಾಕಿಂಗ್ ಪಾಥ್ ನಿರ್ಮಿಸಿ ಕೆರೆಯ ಸೌಂದರ್ಯ ಹೆಚ್ಚಿಸುವ ಸಲುವಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಈ ಭಾಗದಲ್ಲಿ ಸಂತೆ ನಡೆಸಲು ಜಾಗಬೇಕು ಎಂಬ ಬೇಡಿಕೆಯೂ ಇದೆ, ಈ ಬಗ್ಗೆ ಸಾರ್ವಜನಿಕರ ಸಭೆ ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದಲ್ಲಿ 14 ಲಕ್ಷ ರೂ: ಹಿಂದೆ ತಾಲೂಕು ಮೀನುಗಾರರ ಸಂಘದಲ್ಲಿ ಕೇವಲ 60 ಸಾವಿರ ರೂ.ಇತ್ತು. ಈಗ 14 ಲಕ್ಷ ರೂ. ಇದೆ, ಮೀನುಗಾರಿಕೆ ಅಭಿವೃದ್ಧಿಯತ್ತ ಸಾಗಿದೆ, ಕೆರೆ ಅಭಿವೃದ್ಧಿಯಿಂದ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಸಂಘದ ಅಧ್ಯಕ್ಷ ಚಿನ್ನಣ್ಣ ಹೇಳಿದರು.
ಒತ್ತುವರಿಗೆ ಮಳೆಯೇ ಉತ್ತರ: ಕೆರೆಯ ಸುತ್ತ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಳೆ ಇಲ್ಲದೆ ಕೆರೆ ಖಾಲಿ ಇದ್ದಾಗ ಸಣ್ಣ ರೈತರು ಸ್ವಲ್ಪ ಜಾಗವನ್ನು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದುಕೊಳ್ಳುತ್ತಾರೆ, ಮಳೆ ಬಂದು ಕೆರೆ ತುಂಬಿದಾಗ ಕೆರೆಯೇ ಒತ್ತುವರಿಯನ್ನು ತೆರವು ಮಾಡಿಕೊಳ್ಳುತ್ತದೆ ಎಂದರು.
ಮುಂದಿನ ತಿಂಗಳು ಕೆರೆಗಳಿಗೆ ನೀರು: ತಾಲೂಕಿನ 31 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ, ಈಗಾಗಲೇ ಶೇ.90 ಭಾಗ ಕೆಲಸ ಮುಗಿದಿದೆ, ಮುಂದಿನ ೆಬ್ರವರಿ ಅಂತ್ಯಕ್ಕೆ ಈ ಎಲ್ಲ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುವುದು. ಇದರ ಜತೆಗೆ 2 ಕೋಟಿ ರೂ.ವೆಚ್ಚದಲ್ಲಿ ಹೊಸಕೋಟೆಯ ದೊಡ್ಡ ಅಮಾನಿಕೆರೆ ನೀರು ಸಂರಕ್ಷಣೆ ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.