ಕಲಬುರಗಿ: ಮೂಲ ವೃತ್ತಿಯೇ ಮೀನುಗಾರಿಕೆ ಇದ್ದರೆ ಸ್ವಯಂ ಪ್ರೇರಣೆಯಿಂದ ಹಾಗೂ ಅನುಕೂಲವಾಗುವ ರೀತಿ ಸರ್ಕಾರದಿಂದ ಸಹಾಯ ಮಾಡಬಹುದು ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಜಿಲ್ಲಾಧಿಕಾರಿ ಸಂಭಾಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಪಂ ಆಯೋಜಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಮೀನುಗಾರರೊಂದಿಗೆ ಸಂವಾದದಲ್ಲಿ ಮಾತನಾಡಿ, ಸಮಸ್ಯೆ, ಬೇಡಿಕೆಗಳಿದ್ದರೆ ಸರ್ಕಾರದ ಗಮನಕ್ಕೆ ತಂದು ಸ್ಪಂದಿಸಲಾಗುವುದು ಎಂದರು.
ಯಾದಗಿರಿ ಸಹಕಾರಿ ಸಂಘದ ಅಧ್ಯಕ್ಷ ಮಾತನಾಡಿ, ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಮೀನುಗಾರರಿಗೆ ಪ್ರತ್ಯೇಕ ನಿವೇಶನಗಳು, ಸಮುದಾಯ ಭವನ ಒದಗಿಸಬೇಕು. ಮಕ್ಕಳಿಗೆ ವಿಶೇಷ ಶಿಕ್ಷಣ ಸೌಲಭ್ಯ ಕೊಡಬೇಕು. ಕೆಲಸದ ವೇಳೆ ಕೆರೆ, ನದಿಯಲ್ಲಿ ಬಲೆ ಬೀಸಿದಾಗ ಆಗುವ ಅನಾಹುತದಲ್ಲಿ ನಿಧನರಾದರೆ ೧೨ ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಚಿಂಚೋಳಿ ತಾಲೂಕಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಬಿ. ನಾಯಕ ಮಾತನಾಡಿ, ಚಿಂಚೋಳಿ ತಾಲೂಕಿನ ಚದ್ರಂಪಳ್ಳಿ ಡ್ಯಾಂ ಇದೆ. ಐದು ಎಕರೆ ಸ್ಥಳವಿದ್ದು, ಮೀನುಗಾರರಿಗೆ ಅವಕಾಶ ನೀಡಬೇಕು ಎಂದರು.
ಮೀನು ಮಾರಾಟಗಾರರಿಗೆ ಪ್ರಿಜ್ ಸಿಸ್ಟ್ಂನಲ್ಲಿ ಒಂದು ಬುಟ್ಟಿ ಕೊಡಬೇಕು. ಸರ್ಕಾರದಿಂದ ರಿಯಾಯಿತಿ ದರದಲ್ಲಿ ಗಾಡಿ ಕೊಡಿಸಬೇಕು ಎಂದು ಶ್ರೀಕಾಂತ ಚವ್ಹಾಣ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಸಂಘ-ಸAಸ್ಥೆಗಳು ಹೆಚ್ಚಿನ ಕೆಲಸ ಮಾಡಿದರೆ ಹೆಚ್ಚಿನ ಉದ್ಯೋಗದಲ್ಲಿ ಅಳವಡಿಸಿಕೊಳ್ಳಬಹುದು. ಕೋಲಿ ಸಮಾಜದ ಮುಖ್ಯ ಕಸುಬು ಮೀನುಗಾರಿಕೆ ಆಗಿದ್ದು, ಸರ್ಕಾರ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಶೇ. ೯೦ ಕೋಲಿ ಸಮಾಜದವರೆ ಆಗಬೇಕು. ಮೀನುಗಾರಿಕೆ ಮಾರುಕಟ್ಟೆ ಸ್ಥಾಪಿಸಬೇಕು. ಮೀನುಗಾರಿಕೆ ಕಚೇರಿ ಕುಷ್ಠರೋಗಿಗಳ ಬಡಾವಣೆಯಲ್ಲಿದ್ದು, ಪ್ರಾರಂಭಿಸಬೇಕು ಎಂದರು.
ಸಚಿವ ಮಂಕಾಳ ವೈದ್ಯ ಮಾತನಾಡಿ, ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಸತಿ ಇಲಾಖೆಯಿಂದ ಮನೆಗಳನ್ನು ನೀಡಲಾಗುತ್ತಿದೆ. ಬಾಕಿ ಇರುವ ಬೇಡಿಕೆಗಳ ಬಗ್ಗೆ ಶೀಘ್ರ ಸ್ಪಂದಿಸಲಾಗುವುದು ಎಂದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ. ಬಳ್ಳಾರಿ ಮೀನುಗಾರಿಕೆ ಜಂಟಿ ನಿರ್ದೇಶಕರು ಷಡಾಕ್ಷರಿ, ಆಪ್ತ ಕಾರ್ಯದರ್ಶಿ ರವಿಂದ್ರ ಪಿ.ಸಿ, ಮೀನುಗಾರಿಕೆ ಉಪ ನಿರ್ದೇಶಕರು ಎಸ್.ಆರ್. ನಾಗರಾಜ, ಯಾದಗಿರಿಯ ಶರಣಬಸವ, ಪದ್ಮಾವತಿ, ಚಿಂಚೋಳಿಯ ಗಣೇಶ, ಉಮೇಶ ಭೋವಿ, ಶಶಿಕಲಾ ಜೆಡೆ ಇತರರಿದ್ದರು.