ಮೂಡಿಗೆರೆ ಮೀನುಗಾರಿಕೆ ಇಲಾಖೆಯ ಮತ್ಸ್ಯವಾಹಿನಿ ಯೋಜನೆಯಿಂದ ಫಲಾನುಭವಿ ಗಣೇಶ್‌ಗೆ ಗೂಡ್ಸ್ ವಾಹನವನ್ನು ಶಾಸಕಿ ನಯನಾ ಮೋಟಮ್ಮ ಹಸ್ತಾಂತರಿಸಿದರು. ಹೊಸಕೆರೆ ರಮೇಶ್, ಸುಧೀರ್ ಚಕ್ರಮಣಿ, ಎಂ.ಎನ್.ಅಶ್ವತ್ಥ್, ಸಿ.ಬಿ.ಶಂಕರ್, ಎ.ಎಂ.ಮಹೇಶ್ ಇತರರಿದ್ದರು. 
ಜಿಲ್ಲೆ

ಮೀನು ಸಾಕಣೆಯಿಂದ ಆರ್ಥಿಕ ಬಲ

ಮೂಡಿಗೆರೆ: ಸರ್ಕಾರಿ ಸವಲತ್ತು ಪಡೆದ ಫಲಾನುಭವಿಗಳು ಸ್ವಾವಲಂಬಿಗಳಾಗಿ ಉತ್ತಮ ಬದುಕು ನಡೆಸಿದರೆ ಮಾತ್ರ ಯೋಜನೆ ಯಶಸ್ವಿಯಾಗಿ ಸರ್ಕಾರಕ್ಕೆ ಗೌರವ ಸಲ್ಲುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಮೀನುಗಾರಿಕಾ ಇಲಾಖೆಯಿಂದ ಮತ್ಸ್ಯವಾಹಿನಿ ಯೋಜನೆಯಡಿ ಫಲಾನುಭವಿ ಗಣೇಶ್ ಎಂಬುವರಿಗೆ ಗೂಡ್ಸ್ ವಾಹನ ಹಸ್ತಾಂತರಿಸಿ ಮಾತನಾಡಿ, ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪಬೇಕು. ಫಲಾನುಭವಿಗಳು ಅನುದಾನವನ್ನು ಸದ್ಬಳಕೆ ಮಾಡಿಕೊಂಡರೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ. ಮಲೆನಾಡಿನಲ್ಲಿ ಮೀನುಗಾರಿಕೆಗೆ ಉತ್ತಮ ಅವಕಾಶ ಇರುವುದರಿಂದ ಯುವ ಸಮುದಾಯ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದು ತಿಳಿಸಿದರು.

ಮಂಗಳೂರು ಬಂದರಿನಿಂದ ಮೀನು ತಂದು ವ್ಯಾಪಾರದಲ್ಲಿ ತೊಡಗುತ್ತಾರೆ. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆತಿದೆ. ಸರ್ಕಾರದಿಂದ ದೊರೆತಿರುವ ಗೂಡ್ಸ್ ವಾಹನದಲ್ಲಿ ಮೀನು ವ್ಯಾಪಾರ ನಡೆಸಲು ಅವಕಾಶವಿದೆ. ಗ್ರಾಮೀಣ ಭಾಗದ ಜನ ಪ್ರತಿದಿನ ಪಟ್ಟಣಕ್ಕೆ ಬಂದು ದೈನಂದಿನ ಬಳಕೆ ವಸ್ತುಗಳನ್ನು ಖರೀದಿಸಿಕೊಳ್ಳಲು ಸಾಧ್ಯವಿಲ್ಲ. ಸರಕು ತುಂಬಿದ ವಾಹನಗಳಲ್ಲಿ ಗ್ರಾಮೀಣ ಭಾಗಕ್ಕೆ ತೆರಳಿ ವ್ಯಾಪಾರದಲ್ಲಿ ತೊಡಗಿದರೆ ಅಲ್ಲಿನ ಗ್ರಾಮೀಣ ಜನರಿಗೆ ವರದಾನವಾಗುತ್ತದೆ. ವ್ಯಾಪಾರಿಗಳಿಗೂ ಲಾಭವಾಗುತ್ತದೆ. ಇದರಿಂದಾಗಿ ಸರ್ಕಾರದ ಯೋಜನೆ ಪಡೆದಿರುವ ಫಲಾನುಭವಿಗಳ ಸಂಕಷ್ಟ ದೂರವಾಗುತ್ತದೆ ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್ ಮಾತನಾಡಿ, ಮೀನುಗಾರಿಕಾ ಇಲಾಖೆಯ ಮತ್ಸ್ಯವಾಹಿನಿ ಯೋಜನೆ ನಿರುದ್ಯೋಗ ನಿವಾರಣೆಗೆ ವರದಾನವಾಗಿದೆ. ಯುವಕರು ಯೋಜನೆಯ ಲಾಭ ಪಡೆದು ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾವಂತರು ನಾಚಿಕೆ ಮಾಡಿಕೊಳ್ಳದೆ ವ್ಯಾಪಾರದಲ್ಲಿ ತೊಡಗಿದರೆ ಲಾಭಗಳಿಸಿ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ತಾಲೂಕು ಕೆಡಿಪಿ ಸದಸ್ಯ ಎಂ.ಎನ್.ಅಶ್ವತ್ಥ್, ಪಪಂ ನಾಮನಿರ್ದೇಶತ ಸದಸ್ಯ ಸಿ.ಬಿ.ಶಂಕರ್, ಮೀನುಗಾರಿಕೆ ಇಲಾಖೆ ಹಿರಿಯ ಮೇಲ್ವಿಚಾರಕ ಎ.ಎಂ.ಮಹೇಶ್ ಇತರರಿದ್ದರು.