ಜಿಲ್ಲೆ

ಮೀನು, ಮೊಸಳೆ, ಸರಿಸೃಪಗಳಿಗೆ ತರಬೇತಿ ಕೊಡ್ತೀರಾ

Chitradurga - Desk - Pranav Kumar

ಚಿತ್ರದುರ್ಗ: ವಾಣಿವಿಲಾಸ ಸಾಗರ ಹಿನ್ನೀರು ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆಯೇ 2 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡು ಕಟ್ಟಡ ಕಟ್ಟಿದ್ದೀರಿ. ಅದು ಯಾವುದಕ್ಕಾಗಿ ನಿರ್ಮಿಸಲಾಗಿದೆ. ಅಲ್ಲೇನು ಮೀನು, ಮೊಸಳೆ, ಸರಿಸೃಪಗಳಿಗೆ ತರಬೇತಿ ಕೊಡ್ತೀರಾ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಕಿಡಿಕಾರಿದರು.

ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ಅನುಮತಿ ಇಲ್ಲದೆಯೇ ರಸ್ತೆ, ಕಟ್ಟಡ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ವಿಶ್ವೇಶ್ವರಯ್ಯ ನಿಗಮಕ್ಕೆ ಸೇರಿದ ಜಾಗದ ನಡು ಕೆರೆಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ತಿಮ್ಮಯ್ಯನಹಟ್ಟಿ ಗ್ರಾಮಕ್ಕೂ ಕೌಶಲಾಭಿವೃದ್ಧಿ ಕೇಂದ್ರಕ್ಕೂ ಏನು ಸಂಬಂಧ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದರು.

ಕೌಶಲ ತರಬೇತಿ ನೀಡಲು ಕೌಶಲಾಭಿವೃದ್ಧಿ ಇಲಾಖೆಗಾಗಿ 1.86 ಕೋಟಿ ರೂ. ಬಿಡುಗಡೆಯಾಗಿದ್ದು, 1.58 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್ ಮಾಹಿತಿ ನೀಡಿದರು. ನಮ್ಮ ಇಲಾಖೆಗೂ ಈ ಕಟ್ಟಡಕ್ಕೂ ಸಂಬಂಧವಿಲ್ಲವೆಂದು ಕೌಶಲಾಭಿವೃದ್ಧಿ ಅಧಿಕಾರಿ ತಿಳಿಸಿದರು. ಕಟ್ಟಡ ನಿರ್ಮಾಣವಾಗಿದ್ದು, ಯಾವುದಾದರೂ ಇಲಾಖೆಗೆ ಹಸ್ತಾಂತರಿಸಿ ಎಂದು ಎಂಎಲ್ಸಿ ಕೆ.ಎಸ್.ನವೀನ್ ಸಲಹೆ ನೀಡಿದರು.