ಮೈಸೂರು: ಕಾಫಿ ಬೆಳೆಗಾರರ ಬೋರ್‌ವೆಲ್‌ಗೆ ವಿದ್ಯುತ್ ಮೀಟರ್ ಅಳವಡಿಸದಂತೆ ಒತ್ತಾಯಿಸಿ ಸೆ.16ರಂದು ನಗರದ ಚಾಮುಂಡೇಶ್ವರಿ ವಿದ್ಯುತ್ ಸಬರಾಜು ನಿಯಮಿತ (ಸೆಸ್ಕ್) ಕೇಂದ್ರ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೊಡಗಿನಲ್ಲಿ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಸರ್ವೆ ಕಾರ್ಯ ನಡೆಯುತ್ತಿದೆ. ಪ್ರತಿ ಮನೆಗಳಿಗೆ ತೆರಳಿ ಲೈನ್ ಮನ್‌ಗಳು ಆಧಾರ್ ಕಾರ್ಡ್, ವಿಳಾಸ ಸಂಗ್ರಹಿಸುವುದರಲ್ಲಿ ತೊಡಗಿದ್ದಾರೆ. ಇದಕ್ಕೆ ರೈತರ ತೀವ್ರ ವಿರೋಧವಿದೆ ಸಂಘದ ವಿಭಾಗೀಯ ಉಪಾಧ್ಯಕ್ಷ ಮನು ಸೋಮಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯನಗರ (ಹಿನಕಲ್)ದಲ್ಲಿರುವ ಕೇಂದ್ರ ಕಚೇರಿ ಮುಂದೆ ಅಂದು ಬೆಳಗ್ಗೆ 11ರಿಂದ ಪ್ರತಿಭಟನಾ ಧರಣಿ ನಡೆಸಿ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮಳೆಗಾಲದಲ್ಲಿ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದರೂ, ಸೆಸ್ಕ್ ಹಿರಿಯ ಅಧಿಕಾರಿಗಳು ಲೈನ್‌ಮನ್‌ಗಳನ್ನು ಗ್ರಾಹಕರಿಂದ ದಾಖಲೆ ಸಂಗ್ರಹಿಸುವ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಇದರಿಂದ ವಿದ್ಯುತ್ ದುರಸ್ತಿಗೆ ಸಿಬ್ಬಂದಿಯೇ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಆದೇಶ ಬಂದಿದೆ ಎಂದು ಉತ್ತರ ನೀಡುತ್ತಾರೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ರಾಜ್ಯದ ಎಲ್ಲ ಗ್ರಾಮಗಳ ಕರ ನಿರಾಕರಣೆ, ವಿದ್ಯುತ್ ಬಾಕಿ ಮನ್ನಾ ಆಗಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಬೇಕು, ಕಾಫಿ ಬೆಳೆಗಾರರಿಗೆ ರೈತ ಹೋರಾಟದ ಹಿನ್ನೆಲೆಯಲ್ಲಿ ಉಚಿತ ವಿದ್ಯುತ್ ಕೊಡಲು ಒಪ್ಪಿದ ಸರ್ಕಾರ ಈಗ ಮೀಟರ್ ಹಾಕುತ್ತಿರುವುದನ್ನು ಕೈಬಿಡಬೇಕು. ರೈತರ ಮತ್ತು ಕಾಫಿ ಬೆಳೆಗಾರರ ಕುಟುಂಬದ ಎಲ್ಲ ಸದಸ್ಯರಿಗೆ ಉಚಿತ ವಿದ್ಯುತ್ ನೀಡಬೇಕು, ಕನಿಷ್ಠ 12 ಗಂಟೆ ಹಗಲು ತ್ರೀ ಫೇಸ್ ವಿದ್ಯುತ್ ನೀಡಬೇಕು. ಕೃಷಿ ಲಾಭದಾಯಕವಾಗುವವರೆಗೂ ರೈತರಿಗೆ ಮತ್ತು ಕಾರ್ಮಿಕರಿಗೆ ಶುಲ್ಕ ರಹಿತ ವಿದ್ಯುತ್ ಸರಬರಾಜು ಇರಬೇಕು ಎನ್ನುವ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.
ಪದಾಧಿಕಾರಿಗಳಾದ ಶ್ರೀಕಾಂತರಾಜೇ ಅರಸ್, ಶಿರಮಳ್ಳಿ ಸಿದ್ದಯ್ಯ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ ಇದ್ದರು.