ಜಿಲ್ಲೆ

ಮೀನುಗಾರರ ಬದುಕು ಮೂರಾಬಟ್ಟೆ

ಕಾರವಾರ : ಕರೊನಾ ಲಾಕ್​ಡೌನ್ ಮೀನುಗಾರರ ಬದುಕಿನಲ್ಲಿ ತಲ್ಲಣ ಉಂಟುಮಾಡಿದೆ.

ಈ ಬಾರಿ ಮಳೆಗಾಲದ ನಂತರ ಸರಿಯಾಗಿ ಒಂದು ತಿಂಗಳೂ ನಿರಂತರವಾಗಿ ಮೀನುಗಾರಿಕೆ ನಡೆಯಲಿಲ್ಲ. ಮೊದಲು ಪ್ರವಾಹ, ನಂತರ ಬಿರುಗಾಳಿಯಿಂದ ಮೀನುಗಾರಿಕೆ ಸ್ಥಗಿತವಾಗಿತ್ತು. ಜನವರಿಯ ನಂತರ ಸಮುದ್ರಕ್ಕೆ ತೆರಳಿದರೂ ಮತ್ಸ್ಯ ಕ್ಷಾಮ ತಲೆದೋರಿ ಬೋಟ್​ಗಳು ದಡದಲ್ಲೇ ನಿಲ್ಲುವಂತಾಗಿದೆ. ಈಗ ಲಾಕ್​ಡೌನ್​ನಿಂದ ಮೀನುಗಾರಿಕೆ ಮತ್ತೆ ಸಂಪೂರ್ಣ ಸ್ಥಗಿತವಾಗಿದೆ.

ದಿನದ ಊಟ: ಜಿಲ್ಲೆಯಲ್ಲಿ ಸಾವಿರಾರು ಮೀನುಗಾರರು ನಾಡದೋಣಿಯಲ್ಲಿ ಮೀನು ಹಿಡಿದು ಜೀವನ ನಡೆಸುತ್ತಾರೆ. ಅಂದಿನ ದುಡಿಮೆಯಲ್ಲಿ ಅಂದೇ ಊಟ ಮಾಡುವ ಸಾಕಷ್ಟು ಬಡ ಕುಟುಂಬಗಳು ಈ ನಾಡದೋಣಿ ಮೀನುಗಾರಿಕೆಯಲ್ಲಿವೆ. ಅಷ್ಟೇ ಅಲ್ಲದೆ, ಸಾಕಷ್ಟು ಮೀನುಗಾರ ಮಹಿಳೆಯರೂ ಮೀನು ಮಾರಾಟ ಮಾಡಿ ಬಂದ ಲಾಭದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಈಗ ವಾರದಿಂದ ಮೀನುಗಾರಿಕೆ ಬಂದಾಗಿದ್ದರಿಂದ ಈ ಎಲ್ಲ ಕುಟುಂಬಗಳು ಸಂಕಷ್ಟದಲ್ಲಿವೆ. ದಿನದ ಊಟಕ್ಕೂ ಕಷ್ಟ ಪಡುತ್ತಿವೆ. ಒಬ್ಬೊಬ್ಬರೇ ಹೋಗಿ ಮೀನು ಹಿಡಿದು ಬರುತ್ತೇವೆ. ಅವಕಾಶ ಕೊಡಿ ಎಂಬುದು ಅವರ ಅಹವಾಲು.

ಸಾಲ ಕಟ್ಟಲು ಕಷ್ಟ: ಪರ್ಸೀನ್, ಟ್ರಾಲರ್ ಮುಂತಾದ ಬೋಟ್​ಗಳನ್ನು ಹೊಂದಿರುವ ದೊಡ್ಡ ಮೀನುಗಾರರದ್ದು ಇನ್ನೊಂದು ಸಂಕಷ್ಟ. ಹಲವು ದಿನದಿಂದ ಬೋಟ್​ಗಳ ದಡದಲ್ಲೇ ನಿಂತಿವೆ. ಮಾಲೀಕರನ್ನೇ ನಂಬಿಕೊಂಡು ಬಂದ ಹತ್ತಾರು ಕಾರ್ವಿುಕರು ಪ್ರತಿ ದೋಣಿ ಜತೆ ಇದ್ದಾರೆ. ಅವರ, ಊಟ ತಿಂಡಿಯ ಖರ್ಚು ನೋಡಬೇಕಿದೆ. ನಯಾ ಪೈಸೆ ದುಡಿಮೆ ಇಲ್ಲದೆ, ಬ್ಯಾಂಕ್ ಸಾಲದ ಬಡ್ಡಿ ಕಟ್ಟುವುದೂ ಕಷ್ಟವಾಗಿದೆ ಎಂಬುದು ಅವರ ಗೋಳು.

ಗೋವಾದಿಂದ ಮೀನುಗಾರಿಕೆ: ಉತ್ತರ ಕನ್ನಡದಲ್ಲಿ ಎಲ್ಲ ಸ್ವರೂಪದ ಮೀನುಗಾರಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಆದರೆ, ಗೋವಾ ರಾಜ್ಯದ ಬೋಟ್​ಗಳು ಮೀನುಗಾರಿಕೆ ನಡೆಸುತ್ತಿವೆ. ಕಾರವಾರ ಹಾಗೂ ಸುತ್ತಲಿನ ಸಮುದ್ರ ಭಾಗದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿವೆ ಎಂಬುದು ಸ್ಥಳೀಯ ಮೀನುಗಾರರ ದೂರು. ಕಾರವಾರಕ್ಕೆ ಗೋವಾದಿಂದ ರಾತ್ರಿಯ ವೇಳೆ ಮೀನು ಬರುತ್ತಿದೆ. ಹೊನ್ನಾವರದವರೆಗೂ ಅಲ್ಲಲ್ಲಿ ಮಾರಾಟವಾಗುತ್ತಿದೆ. ಅಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ.

ಕರಾವಳಿಯ ಅನ್ನದಾತರಾದ ಮೀನುಗಾರ ಕುಟುಂಬಗಳು ಊಟಕ್ಕಿಲ್ಲದ ಪರಿಸ್ಥಿತಿ ತಲುಪಿವೆ. ಹಲವು ಕಾರ್ವಿುಕರು ಬೇರೆ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಅಂದಿನ ದುಡಿಮೆಯಲ್ಲಿ ಅಂದೆ ಅನ್ನ ಪಡೆಯುವ ಹಲ ಬಡ ಕುಟುಂಬಗಳಿವೆ. ಹಲವರು ಒಬ್ಬೊಬ್ಬರೇ ನಾಡದೋಣಿಯಲ್ಲಿ ಹೋಗಿ ಮೀನುಗಾರಿಕೆ ಮಾಡಲು ಅವಕಾಶ ನೀಡಬೇಕು. ಮನೆ ಮನೆಗೆ ಮೀನು ಮಾರಾಟಕ್ಕೆ ಅವಕಾಶ ನೀಡಬೇಕು. ಮೀನುಗಾರರಿಗೆ ರೈತರಂತೆ ಸರ್ಕಾರ ವಿಶೇಷ ಪ್ಯಾಕೇಜ್ ಕೊಡಬೇಕು. ಆನಂದ ಅಸ್ನೋಟಿಕರ್, ಮಾಜಿ ಸಚಿವ ಕಾರವಾರ
ಮೀನುಗಾರರ ಸಂಕಷ್ಟವನ್ನು ಅರಿತಿದ್ದೇನೆ. ಮೀನುಗಾರಿಕೆಗೆ ಷರತ್ತುಬದ್ಧ ಅವಕಾಶ ನೀಡುವ ಸಂಬಂಧ ಮೀನುಗಾರಿಕೆ ಸಚಿವರಿಗೆ ಮನವಿ ಮಾಡಲಾಗಿದೆ. ರೂಪಾಲಿ ನಾಯ್ಕ , ಶಾಸಕಿ, ಕಾರವಾರ
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಕರೊನಾ ನಿಯಂತ್ರಣಕ್ಕಿರುವ ಮಾರ್ಗ. ಮೀನುಗಾರಿಕೆಗೆ ಅವಕಾಶ ನೀಡಿದರೆ ವಹಿವಾಟು, ಮಾರಾಟಕ್ಕೆ ಹೆಚ್ಚು ಜನ ಸೇರಿದ್ದರಿಂದ ಲಾಕ್​ಡೌನ್ ಮೂಲ ಉದ್ದೇಶ ಈಡೇರದು. ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ ಉತ್ತರ ಕನ್ನಡ
ಗೋವಾ ರಾಜ್ಯದವರಿಗೆ ಇಲ್ಲದ ನಿರ್ಬಂಧ ನಮಗೇಕೆ. ಗೋವಾ ರಾಜ್ಯದ ಬೋಟ್​ಗಳು ಮೊದಲೂ ಲೈಟ್ ಫಿಶಿಂಗ್ ನಡೆಸುತ್ತಿದ್ದವು ಈಗಲೂ ಮುಂದುವರಿಸಿವೆ. ಇಡೀ ದೇಶಕ್ಕೆ ಅನ್ವಯವಾಗುವ ಲಾಕ್​ಡೌನ್ ಗೋವಾಕ್ಕೆ ಅನ್ವಯವಾಗುವುದಿಲ್ಲವೇ..?ಉಮಾಕಾಂತ ಹರಿಕಂತ್ರ ,ಮೀನುಗಾರರ ಮುಖಂಡ