ಜಿಲ್ಲೆ

ಮೀನುಗಾರ ಸ್ನೇಹಿ ಮೊಬೈಲ್ ಆಪ್

ಕಾರವಾರ: ಸಮುದ್ರದ ನಡುವೆ ಮೀನುಗಾರರಿಗೆ ಅನುಕೂಲವಾಗುವ ಮಾಹಿತಿಗಳನ್ನು ನೀಡುವ ಮೀನುಗಾರ ಸ್ನೇಹಿ ಮೊಬೈಲ್ ಆಪ್(ಎಫ್​ಎಫ್​ಎಂಎ)ನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾದ ಎಂ.ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಅಭಿವೃದ್ಧಿ ಪಡಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ಆಪ್ ಬಳಕೆ ಬಗ್ಗೆ ಮೀನುಗಾರರಿಗೆ ತರಬೇತಿ ನೀಡಲಾಗುತ್ತಿದೆ.

ಆಂಡ್ರಾಯ್್ಡ ಫೋನ್​ಗಳಿಗೆ ಅನುಕೂಲವಾಗುವಂತೆ ಆಪ್ ಸಿದ್ಧ ಮಾಡಲಾಗಿದ್ದು, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಡೌನ್​ಲೋಡ್​ಗೆ ಲಭ್ಯವಿದೆ. ಆಪ್ ಕನ್ನಡ ,ಇಂಗ್ಲಿಷ್,ಮರಾಠಿ ಸೇರಿ ಇತರ ಹಲವು ಭಾರತೀಯ ಭಾಷೆಗಳಲ್ಲೂ ಲಭ್ಯವಿದೆ.

ಸಮುದ್ರದಾಳಕ್ಕೆ ಹೋದ ಮೀನುಗಾರರಿಗೆ ಗ್ಲೋಬಲ್ ಪೋಸಿಶನಿಂಗ್ ಸಿಸ್ಟಂ(ಜಿಪಿಎಸ್)ಆಧಾರದ ಮೇಲೆ , ಮಳೆ, ಬಿರುಗಾಳಿ, ಮಿಂಚು ಮುಂತಾದವುಗಳ ಬಗ್ಗೆ ಎಚ್ಚರಿಕೆ, ಆಳ ಸಮುದ್ರದಲ್ಲಿ ಅಪಾಯಕಾರಿ ವಲಯದ ಬಗ್ಗೆ ಎಚ್ಚರಿಕೆ. ದೊಡ್ಡ ಪ್ರಮಾಣದಲ್ಲಿ ಮೀನಿನ ಗುಂಪು ಎಲ್ಲಿದೆ ಎಂಬ ಮಾಹಿತಿ, ಸಮುದ್ರ ಹವಾಮಾನ ಮಾಹಿತಿ ಎಂದರೆ ಅಲೆಗಳ ಎತ್ತರ ಗಾಳಿಯ ವೇಗ, ದಿಕ್ಕು ಮುಂತಾದ ವಿವರಗಳನ್ನು ಒಂದೇ ಕಡೆ ಒದಗಿಸುತ್ತದೆ. ಅಲ್ಲದೆ, ಮೀನಿನ ಮಾರುಕಟ್ಟೆಯ ವಿವರಗಳೂ ಇರಲಿವೆ.

ಇಂಡಿಯನ್ ಕೌನ್ಸಿಲ್ ಆಪ್ ಎಗ್ರಿಕಲ್ಚರ್ ರಿಸರ್ಚ್ (ಐಸಿಎಆರ್), ಕೇಂದ್ರೀಯ ಮೀನುಗಾರಿಕೆ ಸಂಶೋಧನಾ ಕೇಂದ್ರ (ಸಿಎಂಎಫ್​ಆರ್​ಐ)ಮಾರ್ಗದರ್ಶನದಲ್ಲಿ ಇ ಆಪ್​ಗಳಿಗೆ ಮಾಹಿತಿ ಹಾಗೂ ಇತರ ವಿವರಗಳನ್ನು ಒದಗಿಸಲಾಗುತ್ತಿದೆ. ಇನ್ಕೋಯಿಸ್ ಸೇರಿ ವಿವಿಧ ಸಂಸ್ಥೆಗಳು ಇದಕ್ಕೆ ಮಾಹಿತಿ ಒದಗಿಸುತ್ತಿವೆ.

ಕಾರವಾರಕ್ಕೆ ಹೊಸ ಬೋಯ್
ಮೀನುಗಾರರಿಗೆ ಅನುಕೂಲವಾಗುವಂತೆ ಸಮುದ್ರದ ಅಲೆಗಳು ಹಾಗೂ ಗಾಳಿಯ ವೇಗದ ಮಾಹಿತಿ ನೀಡುವ, ಅತ್ಯಾಧುನಿಕ ಸಾಗರ ಹವಾಮಾನ ಮುನ್ಸೂಚನಾ ಉಪಕರಣ (ವೇವ್ ರೈಡರ್ ಬೋಯ್) ಶೀಘ್ರದಲ್ಲಿ ಟ್ಯಾಗೋರ್ ಕಡಲ ತೀರ ಸಮೀಪ ಸ್ಥಾಪನೆಯಾಗಲಿದೆ.

ಹೈದರಾಬಾದ್​ನಲ್ಲಿರುವ ಸಮುದ್ರ ಮಾಹಿತಿ ಮತ್ತು ಸೇವೆಗಳ ರಾಷ್ಟ್ರೀಯ ಕೇಂದ್ರ(ಇನ್​ಕ್ವಾಯಿಸ್ )ಕೆಲ ವರ್ಷಗಳ ಹಿಂದೆಯೇ ತೀರದಲ್ಲಿ ಬಾಯ್ ಅಳವಡಿಸಿದೆ. ಅದು ಉಪಗ್ರಹ ಸಹಾಯದೊಂದಿಗೆ ನೀಡುವ ಡೇಟಾಗಳ ಆಧಾರ ಮೇಲೆ ಮೀನುಗಾರರಿಗೆ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತಿದೆ.ಕರ್ನಾಟಕ ವಿಶ್ವ ವಿದ್ಯಾಲಯ ಕಡಲ ಜೀವಶಾಸ್ತ್ರ ಅಧ್ಯಯನ ವಿಭಾಗ ಇನ್​ಕ್ವಾಯಿಸ್​ನೊಂದಿಗೆ ಒಪ್ಪಂದ ಮಾಡಿಕೊಂಡು ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಈಗ 75 ಲಕ್ಷ ರೂ. ವೆಚ್ಚದಲ್ಲಿ ನೆದರ್​ಲ್ಯಾಂಡ್ ದೇಶದಲ್ಲಿ ತಯಾರಾದ ಹೊಸ ಬೋಯ್ನ್ನು ತರಲಾಗಿದೆ. ಹಾಲಿ ಇರುವ ಬೋಯ್ನ್ನು ಭಟ್ಕಳಕ್ಕೆ ಸ್ಥಳಾಂತರ ಮಾಡಿ, ಇದನ್ನು ಇಲ್ಲಿ ಅಳವಡಿಸುವ ಸಿದ್ಧತೆ ನಡೆದಿದೆ ಎಂದು ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ.ಜೆ.ಎಲ್.ರಾಠೋಡ್ ಮಾಹಿತಿ ನೀಡಿದ್ದಾರೆ.

ಆಳ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ ಒಂದೇ ಕಡೆ ಎಲ್ಲ ಮಾಹಿತಿ ನೀಡುವ ಆಪ್ ಆಗಿದ್ದು, ನಾಡದೋಣಿಗಿಂತ ಪರ್ಸೀನ್​ನಂಥ ಬೋಟ್ ಹೊಂದಿ ಆಳ ಸಮುದ್ರ ಮೀನುಗಾರರಿಗೆ ಅನುಕೂಲವಾಗಲಿದೆ. ಪ್ರತೀಕ ಶೆಟ್ಟಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ