ಜಿಲ್ಲೆ

ಮೀನು ಮಾರುವಾಗ ಜಾಗೃತರಾಗಿರಿ

ಕುಮಟಾ: ಇಲ್ಲಿನ ಮೀನುಪೇಟೆಯಲ್ಲಿ ಮಹಿಳೆಯರಿಗೆ ಶಾಸಕ ದಿನಕರ ಶೆಟ್ಟಿ ಅವರು ಭಾನುವಾರ ಮಾಸ್ಕ್ ವಿತರಿಸಿದರು.

‘ಮೀನು ಮಾರುವಾಗ ಪರಸ್ಪರ ಅಂತರ ಕಾಯ್ದುಕೊಳ್ಳುವ ವಿಷಯದಲ್ಲಿ ಸದಾ ಜಾಗೃತರಾಗಿರಬೇಕು’ ಎಂದರು.

ಭಾನುವಾರ ಕರ್ಫ್ಯೂ ಸಡಿಲಿಕೆಯಿಂದ ಮೀನು ಪ್ರಿಯರಿಗೆ ಸಂತಸವಾಗಿದೆ. ಜತೆಗೆ ಪೇಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮೀನು ಬಂದಿದ್ದರಿಂದ ವ್ಯಾಪಾರ ಜೋರಾಗಿತ್ತು. ಮೀನುಪೇಟೆ ಹಾಗೂ ಅಳ್ವೆದಂಡೆ ರಸ್ತೆಯಲ್ಲಿ ಕುಳಿತು ಮೀನು ಮಾರಾಟ ನಡೆಸಿದ ಮಹಿಳೆಯರ ಬಳಿ ಗ್ರಾಹಕರ ದಂಡೇ ಸೇರಿತ್ತು.

ಈ ವೇಳೆ ಕೆಲ ಮಹಿಳೆಯರು ಮಾತ್ರ ಮಾಸ್ಕ್ ಧರಿಸಿದ್ದರು. ಎಂದಿನಂತೆ ಅಕ್ಕಪಕ್ಕವೇ ಕುಳಿತು ಮಾರಾಟ ನಡೆಸಿದ್ದು ಗ್ರಾಹಕರು ಕೂಡಾ ಒಬ್ಬರಿಗೊಬ್ಬರು ಅಂಟಿಕೊಂಡೇ ಖರೀದಿ ನಡೆಸಿದರು.

ಈ ವೇಳೆ ಮೀನು ಕೊಳ್ಳಲು ಬಂದಿದ್ದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಜನ ಪರಸ್ಪರ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ. ಮೀನುಪೇಟೆಗೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕೆಲ ತಾಸುಗಳಲ್ಲಿ ಸಾವಿರಾರು ಜನ ಬಂದುಹೋಗುವದರಿಂದ ಮಾರಾಟದವರು ಹಾಗೂ ಕೊಳ್ಳುಗರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಪಿಎಸ್​ಐ ಸುಧಾ ಅಘನಾಶಿನಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು ನಿಗಾ ವಹಿಸಿದರು.