ಪಿರಿಯಾಪಟ್ಟಣ; ಕೃಷಿಯಲ್ಲಿ ಉತ್ತಮ ತಾಂತ್ರಿಕತೆಯ ಪದ್ಧತಿ ಅಳವಡಿಸಿಕೊಂಡು ಮಿಶ್ರ ಬೆಳೆ ಬೇಸಾಯ ಪದ್ಧತಿ ಮೂಲಕ ಯಶಸ್ಸು ಸಾಧಿಸಬಹುದು ಎಂಬುದನ್ನು ಪಿರಿಯಾಪಟ್ಟಣ ತಾಲೂಕಿನ ಲಿಂಗಾಪುರ ಗ್ರಾಮದ ಪಿ.ಜೆ.ಸವಿತಾ ಸಾಬೀತು ಮಾಡಿದ್ದಾರೆ.
ಕೊಡಗು ಜಿಲ್ಲೆಯ ಮೂರ್ನಾಡು ಬಳಿಯ ಬೈಲಮನೆ ಕುಟುಂಬದ ಸರಸ್ವತಿ ಮತ್ತು ಬಿ.ಟಿ.ಮುತ್ತಯ್ಯ ದಂಪತಿಯ ಮೂರನೇ ಪುತ್ರಿ ಸವಿತಾ 2000 ರಲ್ಲಿ ತಾಲೂಕಿನ ಲಿಂಗಾಪುರ ಗ್ರಾಮದ ಪೆಮ್ಮಟ್ಟೆ ಕುಟುಂಬದ ಮಾಚಮ್ಮ ಮತ್ತು ಮಾದಪ್ಪ ದಂಪತಿ ಪುತ್ರ ಪಿ.ಎಂ.ಜನಾರ್ದನ್ ಅವರನ್ನು ವರಿಸಿದರು. ಗಂಡನ ಪಾಲಿಗೆ ಬಂದ ಸುಮಾರು 10 ಎಕರೆ ಖಾಲಿ ಜಮೀನು ಮತ್ತು ಒಂದು ಎಕರೆ ಗದ್ದೆಯನ್ನು ವಾಣಿಜ್ಯ ಬೆಳೆಗಳ ತೋಟವನ್ನಾಗಿ ಪರಿವರ್ತಿಸಬೇಕೆಂಬುದು ದಂಪತಿ ಕನಸಾಗಿತ್ತು.
ಕೊಡಗು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಲಿಂಗಾಪುರ ಗ್ರಾಮದಲ್ಲಿ ಕಾಫಿ ಬೆಳೆಗೆ ಸೂಕ್ತ ಹವಾಮಾನ ಇದ್ದಿದ್ದರಿಂದ ಜಮೀನಿನಲ್ಲಿ ಹಂತ ಹಂತವಾಗಿ ಕಾಫಿ ಮತ್ತು ಅಡಕೆ ಬೆಳೆಯಲು ಆರಂಭಿಸಿದರು. ಇವರ ಈ ಕಾರ್ಯಕ್ಕೆ ಪುತ್ರಿ ಬೃಂದಾ ಮತ್ತು ಪುತ್ರ ರೋಹಿನ್ ಬೆನ್ನೆಲುಬಾದರು.
2013ರಲ್ಲಿ ಸವಿತಾ ಅವರ ಪತಿ ಪಿ.ಎಂ.ಜನಾರ್ದನ್ ಅನಾರೋಗ್ಯದಿಂದ ನಿಧನರಾದರು. ಗಂಡನ ಪಾಲಿಗೆ ಬಂದಿದ್ದ 10 ಎಕರೆ ಜಮೀನು ಮತ್ತು ಒಂದು ಎಕರೆ ಗದ್ದೆ ತಂಬಾಕು, ಮುಸುಕಿನ ಜೋಳ, ರಾಗಿ, ಶುಂಠಿ, ಹಸಿಮೆಣಸಿನಕಾಯಿ ಬೆಳೆಗೆ ಸೀಮಿತವಾಗಿತ್ತು. ಆ ಬಳಿಕ ಹಂತ ಹಂತವಾಗಿ ವಾಣಿಜ್ಯ ಬೆಳೆಯ ತೋಟವನ್ನಾಗಿ ಪರಿವರ್ತಿಸಿದರು. ಒಂದೇ ಬೋರ್ವೆಲ್ ಹೊಂದಿದ್ದ ಜಮೀನಿನಲ್ಲಿ ಮತ್ತೆರಡು ಬೋರ್ವೆಲ್ ಕೊರೆಸಿದರು. ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಬಾಳೆ, ಅಡಕೆ, ತೆಂಗು, ಶುಂಠಿಯೊಂದಿಗೆ ಕಾಫಿ ತೋಟದಲ್ಲಿ ನೆರಳಿಗೆ ನೆಡಲಾಗಿದ್ದ ಪಾನಿವಾಳ ಮತ್ತು ಸಿಲ್ವರ್ ಮರಗಳಿಗೆ ಕರಿಮೆಣಸು ಬಳ್ಳಿಯನ್ನು ಹಬ್ಬಿಸಿದರು. ಇದರೊಂದಿಗೆ ಹಣ್ಣಿನ ಗಿಡಗಳಾದ ಬಟರ್ ಫ್ರೂಟ್, ಸಪೋಟ, ಕಿತ್ತಲೆ, ಚಕ್ಕೋತ, ಮಾವು, ಹಲಸು, ಪಪ್ಪಾಯ ಇತರ ಗಿಡಗಳನ್ನೂ ಬೆಳೆಸುವ ಮೂಲಕ ಮಿಶ್ರ ಬೆಳೆ ಬೇಸಾಯ ಮಾಡಿ ಲಾಭ ಗಳಿಸಿದರು.
ತಂಬಾಕು ಮಂಡಳಿಯಿಂದ ಲೈಸೆನ್ಸ್ ಪಡೆದಿರುವ ಸವಿತಾ, ತಂಬಾಕಿನ ಮೇಲೆ ವಿಶ್ವಾಸವಿಡದೆ ಶಾಶ್ವತ ಬೆಳೆಗಳಾದ ಕಾಫಿ, ಕರಿಮೆಣಸು, ಅಡಕೆ, ತೆಂಗು ಬೆಳೆಯತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಸಾಂದರ್ಭಿಕ ಬೆಳೆಗಳಾಗಿ ಶುಂಠಿ, ಬಾಳೆ, ಹಸಿಮೆಣಸಿನಕಾಯಿ ಮತ್ತು ಮುಸುಕಿನ ಜೋಳವನ್ನೂ ಬೆಳೆಯುತ್ತಿದ್ದಾರೆ. ಒಂದು ಎಕರೆ ಗದ್ದೆಯನ್ನು ಭತ್ತದ ಫಸಲಿಗೆ ಮೀಸಲಿಟ್ಟಿರುವ ಇವರಿಗೆ ತಮ್ಮ ಮನೆಗೆ ಸಾಕಾಗುವಷ್ಟು ಭತ್ತದ ಇಟ್ಟುಕೊಂಡು ಉಳಿಕೆಯನ್ನು ಮಾರಾಟ ಮಾಡುತ್ತಿದ್ದಾರೆ. ಈ ನಡುವೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದು, ನಿತ್ಯ 5 ಲೀಟರ್ ಹಾಲನ್ನು ಡೇರಿಗೆ ನೀಡುತ್ತಿದ್ದಾರೆ. ದನದ ಸಗಣಿಯಿಂದ ಪ್ರತಿ ವರ್ಷ ಎರಡರಿಂದ ಮೂರು ಟ್ರ್ಯಾಕ್ಟರ್ ನಷ್ಟು ದನದ ಗೊಬ್ಬರ ಸಿಗುತ್ತದೆ.
ಹೆಚ್ಚಾಗಿ ಕೂಲಿಯಾಳುಗಳಿಗೆ ಅವಲಂಬಿತರಾಗದ ಸವಿತಾ, ಕಾಫಿ ತೋಟದಲ್ಲಿ ಪೈಪ್‌ಲೈನ್ ಅಳವಡಿಸಿ ಸ್ಪ್ರಿಂಕ್ಲರ್‌ಗಳ ಮೂಲಕ ನೀರು ಸಿಂಪಡಿಸುವುದು, ಹಾಲು ಕರೆಯುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದರ ಜತೆಗೆ ಗದ್ದೆಗೆ ನೀರು ಹಾಯಿಸುತ್ತಾರೆ. ಕಾಫಿ ಹಣ್ಣು ಕೊಯ್ಯುವುದು, ಶುಂಠಿ ಕಳೆ ತೆಗೆಯುವುದು ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಕೂಲಿಯಾಳುಗಳನ್ನು ಕರೆಸಿ ಅವರೊಂದಿಗೆ ತಾವೂ ಕೈಜೋಡಿಸುತ್ತಾರೆ. ಜತೆಗೆ ಅಡಕೆ, ಕಾಫಿ ನರ್ಸರಿ ನಡೆಸಿ ತಮ್ಮ ತೋಟಕ್ಕೆ ಅಗತ್ಯವಿರುವ ಕಾಫಿ ಮತ್ತು ಅಡಕೆ ಗಿಡಗಳನ್ನು ತಾವೇ ತಯಾರು ಮಾಡಿಕೊಳ್ಳುತ್ತಾರೆ.
ವಾರ್ಷಿಕವಾಗಿ ಕಾಫಿ ಬೆಳೆಯಿಂದ ಅಂದಾಜು 5 ಲಕ್ಷ ರೂ., ಅಡಕೆ ಬೆಳೆಯಿಂದ ಅಂದಾಜು 7 ಲಕ್ಷ ರೂ., ಶುಂಠಿ, ಬಾಳೆ, ಕರಿಮೆಣಸು, ಹಸಿಮೆಣಸಿನಕಾಯಿ, ಮುಸುಕಿನ ಜೋಳ ಮತ್ತಿತರ ಬೆಳೆ ಹಾಗೂ ಹೈನುಗಾರಿಕೆಯಿಂದ ಒಟ್ಟಾರೆ ಅಂದಾಜು 8 ಲಕ್ಷ ರೂ. ಆದಾಯ ಬರುತ್ತಿದೆ. ವಾರ್ಷಿಕವಾಗಿ ಕೃಷಿ ಮೂಲದಿಂದ ಸುಮಾರು 20 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ನಿರ್ದಿಷ್ಟ ಗುರಿಯೊಂದಿಗೆ ಪರಿಶ್ರಮದಿಂದ ದುಡಿದಲ್ಲಿ ಕೃಷಿ ನಮ್ಮ ಕೈ ಬಿಡಲಾರದು ಎಂಬ ಮಾತಿಗೆ ಈಕೆ ಸಾಕ್ಷಿಯಾಗಿದ್ದಾರೆ.
ನನ್ನದು ಕೃಷಿ ಹಿನ್ನೆಲೆ ಇರುವ ಕುಟುಂಬ. ನಾನು ನನ್ನ ಪತಿಯ ಕನಸನ್ನು ನನಸಾಗಿಸುವ ಗುರಿ ಹೊಂದಿದ್ದೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಬೇಡಿಕೆಗಳನ್ನು ಪೂರೈಸಿದಲ್ಲಿ ನಮ್ಮ ಜೀವನ ಸಾರ್ಥಕವಾಗಲಿದೆ. ಹಣಕ್ಕಾಗಿ ಯಾರ ಬಳಿಯೂ ಕೈಚಾಚದೆ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದೇನೆ. ಸುಧಾರಿತ ಬೇಸಾಯ ಪದ್ಧತಿ ಮತ್ತು ಮಿಶ್ರ ಬೆಳೆ ವಿಧಾನದಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಬಹುದು.
ಪಿ.ಜೆ.ಸವಿತಾ ಪ್ರಗತಿಪರ ಕೃಷಿ ಮಹಿಳೆ