ಜಿಲ್ಲೆ

ಮಿತಿ ಇಲ್ಲದ ಆನಂದವೇ ರಾಮ

ಕಲಬುರಗಿ: ದುಃಖವಿಲ್ಲದ ಆನಂದ ಕೊಡುವುದೇ ರಾಮಾಯಣ, ಮಿತಿಯಿಲ್ಲದ ಅನಂದವೇ ರಾಮ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ.ಕೃಷ್ಣ ಕಾಕಲವಾರ ಹೇಳಿದರು.
ನಗರದ ನೂತನ ವಿದ್ಯಾಲಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಎನ್ವಿ ಪ್ರೌಢ ಶಾಲೆಗಳ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪಿಬರೇ ರಾಮರಸಮ್ (ರಾಮೋತ್ಸವ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮನ ವ್ಯಕ್ತಿತ್ವವನ್ನು ವಾಲ್ಮೀಕಿ ಮಹರ್ಷಿಗಳು ಮಾರ್ಮಿಕವಾಗಿ ಬರೆದಿದ್ದಾರೆ. ರಾಮಾಯಣ ಗ್ರಂಥವು ಪ್ರತಿಯೊಬ್ಬರ ಜೀವನಕ್ಕೆ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿದೆ. ರಾಮಾಯುಣದ ಕತೆ ನಿತ್ಯ ನೂತನವಾಗಿದ್ದು, ದಶಕೋಟಿ ವಿಸ್ತಾರವಾಗಿದೆ. 24 ಸಾವಿರ ಶ್ಲೋಕಗಳನ್ನೊಳಗೊಂಡ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ನಮಗೆ ಕೊಡುಗೆಯಾಗಿ ನೀಡಿದ್ದಾರೆ.
ನಮ್ಮಲ್ಲಿನ ಮನಸ್ಸು ಯುದ್ದಕ್ಕೆ ಕಾರಣವಾಗುತ್ತದೆ. ಬೇಕು ಎನ್ನುವುದೇ ಯುದ್ಧ್ದ. ನಾವು ಎಲ್ಲವನ್ನೂ ಬೇಕು ಎಂದು ಬಯಸುವು ದರಿಂದಲೇ ಇಂದು ಯುದ್ಧಗಳಾಗುತ್ತ್ತವೆ. ನಿರಾಕರಿಸಿದರೆ ಯುದ್ಧ್ಧಕ್ಕೆ ಅವಕಾಶವೇ ಸಿಗುವುದಿಲ್ಲ. ರಾಮನು ಕೈಕೇಯಿ ಮಾತಿಗೆ ಒಪ್ಪದೆ ವನವಾಸಕ್ಕೆ ತೆರಳದಿದ್ದರೆ ಅಲ್ಲಿ ಯುದ್ಧ್ವಾಗುತ್ತಿತ್ತು. ರಾಮನಿಗೆ ಅದು ಬೇಡವಾಗಿತ್ತು. ಅಂತಲೆ ಯುದ್ದವಾಗಲಿಲ್ಲ ಎಂದರು.
ಕೈಕೇಯಿ ಮಾತಿನಿಂದ ರಾಮ ವನವಾಸಕ್ಕೆ ತೆರಳಿದ. ಆದರೆ ವಾಸ್ತವವೇ ಬೇರೆ. ದುಷ್ಟರನ್ನು ಸಂಹರಿಸಿ, ಭಕ್ತರನ್ನು ಉದ್ಧರಿಸಲೆಂದು ವನವಾಸಕ್ಕೆ ತೆರಳಿದ. ಎಲ್ಲ ಕವಿಗಳಿಗೆ ವಾಲ್ಮೀಕಿ ಮಹರ್ಷಿಗಳು ಮಾದರಿಯಾಗಿದ್ದಾರೆ. ಅವರು ರಚಿಸಿರುವ ರಾಮಾಯಣದಲ್ಲಿ ಏಳು ಕಾಂಡಗಳನ್ನಾಗಿ ವಿಂಗಡಿಸಿದ್ದಾರೆ. ರಾಮಾಯಣದಲ್ಲಿನ ಸಾರವನ್ನು ನಾವು ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು. ರಾಮನ ಆದರ್ಶ ಸಂಪೂರ್ಣವಾಗಿ ಅಳವಡಿಸಿಕೊಳ್ಳದಿದ್ದರೂ. ಕೆಲವನ್ನಾದಾರೂ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ದೇಶ ರಾಮ ರಾಜ್ಯವಾಗಲು ಸಂದೇಹವಿಲ್ಲ ಎಂದು ಹೇಳಿದರು.
ನೂತನ ವಿದ್ಯಾಲಯ ಸಂಸ್ಥೆ ಉಪಾಧ್ಯಕ್ಷ ಶ್ರೀಕಾಂತ ಕುಲಕರ್ಣಿ , ಗಾಯತ್ರಿ ಸಂಸ್ಕೃತ ಪಾಠ ಶಾಲೆ ಮುಖ್ಯಗುರು ಪಂ. ಹಣಮಂತಾಚಾರ್ಯ ಸರಡಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಪರೀವೀಕ್ಷಕ ದ್ಯಾವಪ್ಪ ದೇಸಾಯಿ, ವಲಯ ಸಂಯೋಜಕ ಮಲ್ಲನಗೌಡ ಪಾಟೀಲ್, ಎನ್ವಿ ಬಾಲಕರ ಪೌಢ ಶಾಲೆ ಉಪ ಪ್ರಾಚಾರ್ಯ ವಿಜಯಕುಮಾರ ಪಾಟೀಲ್ ಉಪಸ್ಥಿತರಿದ್ದರು.