ಧಾರವಾಡ: ಮಿಡತೆಗಳು ಕೆಲ ರಾಜ್ಯಗಳಲ್ಲಿ ಕೃಷಿ, ಅರಣ್ಯ ಹಾಗೂ ತೋಟಗಾರಿಕೆ ಬೆಳೆಗಳ ಮೇಲೆ ದಾಳಿ ನಡೆಸಿದ್ದು, ಈ ಕುರಿತು ಕೃಷಿ ಇಲಾಖೆ ಹಾಗೂ ರೈತರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮರಭೂಮಿ ಮಿಡತೆಗಳ ಹಾವಳಿ ತಡೆಗಟ್ಟುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಿಡತೆಗಳ ಹಿಂಡು ವಿವಿಧ ರಾಜ್ಯಗಳ ಮೂಲಕ ಸಂಚರಿಸಿ ಬೆಳೆಗಳನ್ನು ತಿನ್ನುತ್ತವೆ. ಇವುಗಳನ್ನು ಸಮರ್ಥವಾಗಿ ನಿಯಂತ್ರಿಸಲು ಕೃಷಿ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ರೂಪಿಸಬೇಕು ಎಂದರು.
ಮಿಡತೆಗಳು ಜಮೀನುಗಳಿಗೆ ಆಗಮಿಸಿದರೆ, ಬೆಳೆಗಳ ರಕ್ಷಣೆಗೆ ಖಾಲಿ ಡಬ್ಬ, ತಟ್ಟೆ, ಡ್ರಮ್ ಡೋಲು ಅಥವಾ ಇತರ ಇಲೆಕ್ಟ್ರಾನಿಕ್ ಉಪಕರಣಗಳಿಂದ ಶಬ್ದ ಮಾಡಿ ಮಿಡತೆಗಳು ದಾಳಿ ನಡೆಸದಂತೆ ಎಚ್ಚರಿಕೆ ವಹಿಸಿ ಓಡಿಸಬಹುದು ಎಂದರು.
ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಕಮಿಟಿಯಿಂದ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಮಿಡತೆಗಳ ಮಾಹಿತಿ ನೀಡಬೇಕು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ಅಗತ್ಯವೆನಿಸಿದರೆ ವಿಶೇಷ ಗ್ರಾಮ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ. ಮಾತನಾಡಿ, ಮಿಡತೆಗಳ ಹಾವಳಿ ಕಂಡು ಬಂದಲ್ಲಿ ಬೇವಿನ ಮೂಲ ಕೀಟನಾಶಕ ಶೇ. 0.15 ಇ.ಸಿಯನ್ನು ಪ್ರತಿ 15 ಲೀಟರ್ಗೆ 45 ಎಂಎಲ್ನಂತೆ ಸೇರಿಸಿ ಬೆಳೆಗೆ ಸಿಂಪಡಿಸಿ ಮಿಡತೆ ವಿಕರ್ಷಿಸಬಹುದು. ಬೆಳೆಗಳ ಮೇಲೆ ಶೇ. 1.5ರ ಕ್ವಿನಾಲ್ ಫಾಸ್ ಅಥವಾ ಶೇ. 1.5ರ ಕ್ಲೋರೋಫ್ಲೈರಿಫಾಸ್ ಅಥವಾ ಶೇ. 2ರ ಮಿಥೈಲ್ ಫೆರಾಥಿಯಾನ್ ಹುಡಿಯನ್ನು ನಿಂತ ಬೆಳೆಗಳ ಮೇಲೆ ಧೂಳೀಕರಿಸಬಹುದು. 500 ಎಂಎಲ್ ಡಿಡಿವಿಪಿ, 76 ಇಸಿ ಕೀಟ ಔಷಧವನ್ನು 500 ಎಂಎಲ್. ನೀರಿನೊಂದಿಗೆ ಬೆರೆಸಿ 100 ಕಿಲೋ ಒಣ ಉಸುಕಿನೊಂದಿಗೆ ಮಿಶ್ರಣಮಾಡಿ ಬೆಳೆಗಳ ಮೇಲೆ ಎರಚಬಹುದು ಎಂದರು.
ಕೃಷಿ ವಿವಿಯ ಕೀಟಶಾಸ್ತ್ರಜ್ಞ ಡಾ. ಎಸ್.ಎಂ. ಜಾಧವ, ಸಹ ವಿಸ್ತರಣಾ ನಿರ್ದೇಶಕ ಡಾ. ಪಿ.ಎಸ್. ಹೂಗಾರ ಮಿಡತೆಗಳ ಜೀವನ ಚಕ್ರದ ಬಗ್ಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ರಾಮಚಂದ್ರ ಕೆ.ಎಂ. ಇತರರಿದ್ದರು.