ಚಿತ್ರದುರ್ಗ: ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ನಾಯಕ, ಗೋರಕ್ಷಕ, ನುಡಿದಂತೆ ನಡೆದ ಸತ್ಯ ಸಂತ ಗಾದ್ರಿಪಾಲನಾಯಕ ಸ್ವಾಮಿಯ ಸಾಲು-ಸಾಲು ಎತ್ತಿನ ಗಾಡಿಗಳ ಮಿಂಚೇರಿ ಮಹೋತ್ಸವ 5 ವರ್ಷಗಳ ಬಳಿಕ ಮತ್ತೆ ವೈಭವಕ್ಕೆ ಸಾಕ್ಷಿಯಾಗಲಿದೆ.
ತಾಲೂಕಿನ ಬಚ್ಚಬೋರನಹಟ್ಟಿಯಿಂದ ಡಿ. 23ರಂದು ಆರಂಭವಾಗಲಿದ್ದು, ಬೆಳಗ್ಗೆ 7ಕ್ಕೆ ದೇವರ ಮಜ್ಜನ ಬಾವಿಯಲ್ಲಿ ಗಂಗಾ ಪೂಜೆ ನಡೆದ ನಂತರ 11.30ಕ್ಕೆ ಹೊರಡಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.
27ರಂದು ಮಧ್ಯಾಹ್ನ 2ಕ್ಕೆ ನಗರದ ರಾಜ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಸಂಚರಿಸಲಿದೆ. 23ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸುವರು. ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಡಿಸಿ ದಿವ್ಯಾಪ್ರಭು, ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಜಿಪಂ ಸಿಇಒ ಸೋಮಶೇಖರ್, ಇನ್ನಿತರೆ ಅಧಿಕಾರಿಗಳು, ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಹಸು ಸಾಕಾಣಿಕೆಯಲ್ಲಿ ತೊಡಗಿದ್ದ ಗಾದ್ರಿಪಾಲನಾಯಕ ಸ್ವಾಮಿ, ಹುಲಿ ಮಧ್ಯೆ ನಡೆದ ಸೆಣಸಾಟದಲ್ಲಿ ಸಾವನ್ನಪ್ಪಿದ ಘಟನೆ ಇತಿಹಾಸವಾಗಿ ಉಳಿದಿದೆ. ಸಮಾಧಿಗಳು ಮಿಂಚೇರಿಯಲ್ಲಿದೆ. ಹೀಗಾಗಿ ಅಲ್ಲಿಗೆ ಹೋಗಿ ಮಹೋತ್ಸವ ಆಚರಿಸುವ ಪದ್ಧತಿ ಮುಂದುವರೆದಿದೆ ಎಂದರು.
ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೆಗುದ್ದು, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ಮದಕರಿಪುರ, ಮಿಂಚೇರಿಪುರ, ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿ 27ರಂದು ಚಿತ್ರದುರ್ಗ ಪ್ರವೇಶಿಸಲಿದೆ. ಇದು ಬುಡಕಟ್ಟು ಜನಾಂಗದ ವಿಶಿಷ್ಟ ಆಚರಣೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ದೀಪು, ತಮಟಕಲ್ಲು ಬಸಣ್ಣ, ಡಿ.ಗೋಪಾಲಸ್ವಾಮಿ ನಾಯಕ, ಬೋರಯ್ಯ, ನೆಲಗೇತನಹಟ್ಟಿ ಬೋರಯ್ಯ, ರಮೇಶ್, ಬಸವರಾಜು, ಪಾಲಯ್ಯ, ಬಿ.ಬೋರಯ್ಯ, ಸಣ್ಣ ಬೋರಯ್ಯ, ಪ್ರಹ್ಲಾದ್, ಪಾಪಣ್ಣ, ಮೂರ್ತಿ, ಕಾಟಿಹಳ್ಳಿ ಕರಿಯಣ್ಣ, ಸಣ್ಣ ಹನುಮಂತಸ್ವಾಮಿ ಇತರರಿದ್ದರು.