ಮೈಸೂರು: ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ನಿಟ್ಟಿನಲ್ಲಿ ಸ್ಥಾಪನೆಯಾಗಿರುವ ದೊಡ್ಡಬಳ್ಳಾಪುರ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಮೈಸೂರು ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ.
ಆರ್‌ಟಿಐ ಮೂಲಕ ದಾಖಲೆ ಪಡೆದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲಾಗುತ್ತಿದ್ದು, ಆರ್‌ಟಿಐ ಕಾರ್ಯಕರ್ತರಿಗೆ ಕೆಲವೊಮ್ಮೆ ಜೀವ ಬೆದರಿಕೆ ಎದುರಾಗುತ್ತಿದೆ. ಹೀಗಾಗಿ ಅಂತಹವರನ್ನೆಲ್ಲ ಒಟ್ಟಿಗೆ ಸೇರಿಸಿ ಸಂಘಟಿತ ಹೋರಾಟ ನಡೆಸುವ ನಿಟ್ಟಿನಲ್ಲಿ ವೇದಿಕೆ ಸ್ಥಾಪನೆಯಾಗಿದೆ ಎಂದು ವೇದಿಕೆ ಅಧ್ಯಕ್ಷ ಹನುಮಂತರಾಯಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಸುತ್ತೋಲೆ ಹಾಗೂ ಆದೇಶಗಳಂತೆ ಕರ್ತವ್ಯ ನಿರ್ವಹಿಸದೆ ಹಾಗೂ ಲಂಚದ ಬೇಡಿಕೆ ಇಡಲಾಗುತ್ತಿದೆ. ಜತೆಗೆ, ಸರ್ಕಾರದ ನೀತಿ ನಿಯಮ ಕಾನೂನುಗಳಂತೆ ಸೂಚನಾ ಫಲಕ, ನಾಮಫಲಕ ಹಾಕದೆ ಮನಸ್ಸಿಗೆ ಬಂದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಕಾಫಿ, ಟೀ, ತಿಂಡಿ, ಊಟ, ಮೀಟಿಂಗ್ ನೆಪ ಹೇಳಿ ಸಾರ್ವಜನಿಕರನ್ನು ಅಲೆಯುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಗೆ ಹಲವಾರು ದೂರು ಬಂದ ಹಿನ್ನೆಲೆಯಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಭ್ರಷ್ಟಾಚಾರ ತೊಡೆದು ಹಾಕಲು ಉತ್ತಮ ಕಾರ್ಯಕರ್ತರನ್ನು ಆಯ್ಕೆ ಮಾಡಿ ಮೈಸೂರು ಜಿಲ್ಲಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕೊಲೆಯಾದ ಆರ್‌ಟಿಐ ಕಾರ್ಯಕರ್ತರೊಬ್ಬರ ತಾಯಿ ಶಾಂತಮ್ಮ ವೇದಿಕೆ ಜಿಲ್ಲಾ ಘಟಕ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಹೇಮಂತ್, ಮುಖಂಡರಾದ ರಮೇಶ್, ಕೆ.ಎಚ್.ವೆಂಕಟೇಶ್, ಚನ್ನಪ್ಪ, ಇನ್ನಿತರರು ಹಾಜರಿದ್ದರು.