ಬಳ್ಳಾರಿ : ಜಿಲ್ಲೆಯ ತಾಲೂಕುಗಳಲ್ಲಿ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಲು ಸೂಕ್ತ ಎಂದು ಮಣ್ಣು ಪರೀಕ್ಷಿಸಿ, ರೈತರಿಗೆ ಮಾಹಿತಿ ನೀಡಬೇಕು ಎಂದು ಸಂಸದ ಈ. ತುಕಾರಾಮ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ(ದಿಶಾ) ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಐದು ತಾಲೂಕುಗಳಲ್ಲಿ ವೈವಿಧ್ಯಮ ಪ್ರದೇಶವಿದ್ದು, ಅದಕ್ಕೆ ತಕ್ಕಂತೆ ಬೆಳೆ ಬೆಳೆಯಲು ರೈತರಿಗೆ ಮಾಹಿತಿ ನೀಡಿ. ಇದಕ್ಕೆ ಆಹಾರ ಹಾಗೂ ತೋಟಗಾರಿಕೆಯು ಸಹಕಾರ ಒದಗಿಸಬೇಕು ಎಂದರು. ಜಿಲ್ಲಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದು, ಎಪಿಎಂಸಿ ಮೆಣಸಿನಕಾಯಿ ವ್ಯಾಪಾರ ವಹಿವಾಟು ನಡೆಸಲು ಕ್ರಮವಹಿಸಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾಗೆ ಸೂಚಿಸಿದರು. ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರು ಹೆಚ್ಚುತ್ತಿದ್ದು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಬಾಲ್ಯ ವಿವಾಹ ತಡೆಯಬೇಕು. ಎಲ್ಲ ಶಾಲೆಗಳಲ್ಲಿ ಬಾಲ್ಯ ವಿವಾಹ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಡಿಡಿಪಿಐ ಅವರಿಗೆ ನಿರ್ದೇಶಿಸಿದರು.
ಮಾಹಿತಿ ತರದ ಅಧಿಕಾರಿಗಳು : ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಶಿಕ್ಷಣ ಇಲಾಖೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ ಇಲಾಖೆಯ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಒದಗಿಸಿಲ್ಲ. ಅಲ್ಲದೆ, ಸಂಸದ, ಶಾಸಕರು ಅಧಿಕಾರಿಗಳನ್ನು ಯಾವ ಯಾವ ಯೋಜನೆಗಳು ಸಾರ್ವಜನಿಕರಿಗೆ ತಲುಪದಿಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡಲು ತಡಪಡಿಸಿದರು. ಕೆಲ ಅಧಿಕಾರಿಗಳಿಗೆ ಮುಂದಿನ ಸಭೆ ಹಾಜರಾಗುವ ಮುನ್ನ ಈ ಎಲ್ಲ ಅಂಶಗಳನ್ನು ನೀಡಬೇಕು, ಅದನ್ನೆಲ್ಲ ಬರೆದುಕೊಳ್ಳಿ ಎಂದು ತಿಳಿಸಿದರು. ಪ್ರತಿಯೊಬ್ಬ ಅಧಿಕಾರಿಗೆ ಇನ್ನೋಮ್ಮೆ ಈ ತರಹ ತಪ್ಪು ಆಗದಂತೆ ಕ್ರಮವಹಿಸಿ ಎಂಬ ಅನೇಕ ಬಾರಿ ಸಭೆಯಲ್ಲಿ ಕೇಳಿಸಿತು.
ಶಿಷ್ಟಾಚಾರ ಉಲ್ಲಂಘಿಸಿದ ಸಭೆ : ದಿಶಾ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಂಸದ ಹಾಗೂ ಶಾಸಕರ ಅಲ್ಲದೆ, ರಾಜಕೀಯ ಮುಖಂಡರ ಬೆಂಬಲಿಗರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಗರ ಶಾಸಕ ಭರತರೆಡ್ಡಿ ಸಭೆ ಗೈರಾದರೆ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ, ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಒಂದು ಗಂಟೆ ತಡವಾಗಿ ಸಭೆಗೆ ಹಾಜರಾದರು. ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಮೈಕ್ ಕೆಟ್ಟ ಪರಿಣಾಮ ಮಾತನಾಡುವುದು ಸ್ಪಷ್ಟವಾಗಿ ಕೇಳಿಸುತ್ತಿರಿಲಿಲ್ಲ. ದಿಶಾ ಸಭೆಯಲ್ಲಿಯೂ ಶಾಸಕರಾದ ಜೆ.ಎನ್. ಗಣೇಶ, ಬಿ.ಎಂ.ನಾಗರಾಜ ಅವರ ಮೈಕ್ ಸರಿಯಾಗಿ ಕೆಲಸ ನಿರ್ವಹಿಸದೆ ಇದ್ದರಿಂದ, ಅಧಿಕಾರಿಗಳಿಗೆ ಸರಿಯಾಗಿ ಪ್ರಶ್ನೆ ಅರ್ಥವಾಗದೆ ಉತ್ತರಿಸಲು ಹರಸಾಹಸ ಪಟ್ಟರು. ಪ್ರಧಾನಮಂತ್ರಿ ಅವಾಸ್ ಯೋಜನೆಯ ಸಂಬಂಧಪಟ್ಟ ಅಧಿಕಾರಿಯೊಬ್ಬರಿಗೆ ಸರಿಯಾಗಿ ಕಾರ್ಯ ನಿರ್ವಹಿಸದೆ, ಬೇಜಬ್ದಾರಿತನ ತೋರಿದರೆ ಸಿಎಂ ಗಮನಕ್ಕೆ ತಂದು ಸಸ್ಪೆಂಡ್ ಮಾಡಿಸಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ ಎಚ್ಚರಿಸಿದರು. ಇದೇ ವೇಳೆ ಸಂಸದ ಈ. ತುಕಾರಾಮ್ ಅವರಿಂದ ಸಾರ್ವಜನಿಕರ ಅಹವಾಲು ಆಲಿಸಲಾಯಿತು.