ಜಿಲ್ಲೆ

ಮಾಹಿತಿ ನೀಡದಿದ್ದರೆ ಆಸ್ಪತ್ರೆ ಮೇಲೆ ಕ್ರಮ

ಬೀದರ್: ಜಿಲ್ಲಾಡಳಿತ ಕೇಳುವ ಮಾಹಿತಿ ಒದಗಿಸದ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳ ಮೇಲೆ ಕೆಪಿಎಂಎ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲಾಡಳಿತ ಕೇಳುವ ಮಾಹಿತಿಯನ್ನು ಸಂಬಂಧಿತ ವೆಬ್ಪೋರ್ಟಲ್ನಲ್ಲಿ ಆಯಾ ಆಸ್ಪತ್ರೆಗಳು ಪ್ರತಿ ದಿನ ಅಪ್ಲೋಡ್ ಮಾಡಲೇಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಆಸ್ಪತ್ರೆಗಳ ನೋಂದಣಿಯೇ ರದ್ದುಪಡಿಸಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಕಂಟೇನ್ಮೆಂಟ್ ಜೋನ್ದಲ್ಲಿ ಸಮೀಕ್ಷೆ ನಡೆಸಿ, ಆ ಪ್ರದೇಶದಲ್ಲಿನ ಐಎಲ್ಐ (ಕೆಮ್ಮು, ನೆಗಡಿ ಮತ್ತು ಜ್ವರ) ಮತ್ತು ಸಾರಿ (ತುಂಬಾ ಉಸಿರಾಟದ ತೊಂದರೆ ಇರುವ) ಪ್ರಕರಣ ಮತ್ತು ಆ ಪ್ರದೇಶದಲ್ಲಿನ ಗರ್ಭಿಣಿ, ವಯಸ್ಸಾದವರ, ಹೃದಯ ಕಾಯಿಲೆ, ಮಧುಮೇಹದಂಥ ರೋಗಪೀಡಿತರ ಸ್ಯಾಂಪಲ್ ಟೆಸ್ಟ್ ಮಾಡಲು ಕೂಡಲೇ ಮುಂದಾಗಲು ಹೇಳಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಡಿಸಿ ರುದ್ರೇಶ ಗಾಳಿ, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ, ಡಿಎಚ್ಒ ಡಾ. ವಿ.ಜಿ.ರಡ್ಡಿ, ಡಾ. ಕೃಷ್ಣಾ ರಡ್ಡಿ, ಡಾ. ಇಂದುಮತಿ ಪಾಟೀಲ್, ಡಾ. ದೀಪಾ ಖಂಡ್ರೆ ಇತರರಿದ್ದರು.