ಜಿಲ್ಲೆ

ಮಾಹಿತಿ ಕೇಂದ್ರವಾದ ಜೆರಾಕ್ಸ್ ಅಂಗಡಿಗಳು!

ಹುಬ್ಬಳ್ಳಿ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡಿದ್ದ ಬೇರೆ ರಾಜ್ಯಗಳ ವಲಸೆ ಕಾರ್ವಿುಕರಿಗೆ ಇಲ್ಲಿಯ ಜೆರಾಕ್ಸ್ ಅಂಗಡಿಗಳು ಮಾಹಿತಿ ಕೇಂದ್ರಗಳಾಗಿ ಮಾರ್ಪಟ್ಟಿದ್ದವು.

ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿರುವ ಖಾಸಗಿಯವರ 3 ಜೆರಾಕ್ಸ್ ಅಂಗಡಿಗಳು ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇದೇ ಕೆಲಸವನ್ನು ಮಾಡಿವೆ. ಆದರೆ, ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದ್ದ ಪಕ್ಕದ ಮಿನಿ ವಿಧಾನಸೌಧದಲ್ಲಿರುವ ಹುಬ್ಬಳ್ಳಿ ನಗರ ತಹಸೀಲ್ದಾರ್ ಕಚೇರಿ ನಿರ್ಲಿಪ್ತವಾಗಿತ್ತು.

ವಲಸೆ ಕಾರ್ವಿುಕರು ವಿವರಗಳನ್ನು ದಾಖಲಿಸ ಬೇಕಿರುವ ಮನವಿ ಪ್ರತಿಯನ್ನು ತಲಾ 5 ರೂ. ನಂತೆ ಜೆರಾಕ್ಸ್ ಅಂಗಡಿಗಳು ಮಾರಾಟ ಮಾಡಿದವು. ಜತೆಗೆ ಈ ಮನವಿ ಪ್ರತಿಯನ್ನು ವಾಟ್ಸ್​ಆಪ್ ನಂಬರ್​ಗೆ ಅಪ್​ಲೋಡ್ ಮಾಡಬೇಕೆಂದು ಅಂಗಡಿಗಳ ಹೊರಗೆ ಫಲಕ ನೇತು ಹಾಕಿದ್ದವು. ಅವು ಜಿಲ್ಲಾಡಳಿತ ಸೂಚಿಸಿದ್ದ ಅಧಿಕೃತ ವಾಟ್ಸ್ ಆಪ್ ನಂಬರ್ (ಮೊ-9449847646, 9449847641)ಗಳೇ ಆಗಿದ್ದವು.

ಜೆರಾಕ್ಸ್ ಅಂಗಡಿಗಳ ಎದುರು ಹಾಗೂ ಪಕ್ಕದ ಮಿನಿ ವಿಧಾನಸೌಧದ ಆವರಣದಲ್ಲಿ ನೂರಾರು ಜನ ವಲಸೆ ಕಾರ್ವಿುಕರು ಜಮಾಯಿಸಿದ್ದರು. ಸರದಿ ಸಾಲಿನಲ್ಲಿ ನಿಂತು ಮನವಿ ಪ್ರತಿಯನ್ನು ಪಡೆದರು. ಲ್ಯಾಮಿಂಗ್ಟನ್ ರಸ್ತೆಗೆ ಹೊಂದಿಕೊಂಡಿರುವ ಈ ಜೆರಾಕ್ಸ್ ಅಂಗಡಿಗಳು ಪರಸ್ಪರ ಅಂತರ ಕಾಯ್ದುಕೊಳ್ಳಲು ಫುಟ್​ಪಾತ್ ಮೇಲೆ ಮಾರ್ಕಿಂಗ್ ಮಾಡಿದ್ದವು. ಮನವಿ ಪ್ರತಿಯಲ್ಲಿ ಪೂರ್ಣ ಹೆಸರು, ಹಾಲಿ ವಾಸ ಸ್ಥಳದ ವಿಳಾಸ, ತೆರಳಬೇಕಿರುವ ರಾಜ್ಯ, ಜಿಲ್ಲೆ, ತಾಲೂಕು, ನಗರ, ಗ್ರಾಮಗಳ ವಿವರ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. 1 ಮನವಿ ಪ್ರತಿಯಲ್ಲಿ 9 ಜನ ವಿವರಗಳನ್ನು ಸಲ್ಲಿಸಿ ವಾಟ್ಸ್ ಆಪ್ ನಂಬರ್​ಗೆ ಕಳುಹಿಸಬೇಕು.

ವಲಸೆ ಕಾರ್ವಿುಕರು ಮಿನಿ ವಿಧಾನಸೌಧದ ಆವರಣದಲ್ಲಿ ಕುಳಿತು ಮನವಿ ಪ್ರತಿಯಲ್ಲಿ ವಿವರಗಳನ್ನು ದಾಖಲಿಸಿದರು. ಇವರಿಗೆ ಮಾರ್ಗದರ್ಶನ ಮಾಡುವ ಯಾವುದೇ ರೀತಿಯ ಪ್ರಯತ್ನಗಳು ಸರ್ಕಾರಿ ಅಧಿಕಾರಿ/ಸಿಬ್ಬಂದಿಯಿಂದ ನಡೆಯಲಿಲ್ಲ. ತಹಸೀಲ್ದಾರ್ ಕಚೇರಿ ಹಾಗೂ ಪಾಲಿಕೆ ವಲಯ ಕಚೇರಿಗಳಲ್ಲಿ ವಲಸೆ ಕಾರ್ವಿುಕರಿಗೆ ಅಗತ್ಯ ನೆರವು ನೀಡಬೇಕೆಂಬ ನಿರ್ದೇಶನ ಸರ್ಕಾರದಿಂದ ಇದೆ. ಭಾಷಾ ಸಮಸ್ಯೆಯಿಂದ ವಲಸೆ ಕಾರ್ವಿುಕರು ತೊಂದರೆಗೆ ಒಳಗಾಗುವ ಸಾಧ್ಯತೆಗಳಿರುತ್ತದೆ ಎಂಬ ಕಲ್ಪನೆ ಅಧಿಕಾರಿಗಳಿಗೆ ಇದ್ದಂತಿಲ್ಲ. ಕಚೇರಿಯಲ್ಲಿ ವೆಬ್​ಸೈಟ್ ವಿಳಾಸ (ಡಿಡಿಡಿ.ಠಛಿಡಚಠಜ್ಞಿಛಜ್ಠ.kಚ್ಟ್ಞಠಿಚkಚ.ಜಟಡ.ಜ್ಞಿ) ವನ್ನು ಅಂಟಿಸಿಕೊಂಡು ಕುಳಿತಿದ್ದಾರೆ. ವಾಟ್ಸ್​ಆಪ್ ನಂಬರ್ ಎಲ್ಲಿಯೂ ಉಲ್ಲೇಖವಿಲ್ಲ.

ಭಾನುವಾರ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಮೂಲದ ವಲಸೆ ಕಾರ್ವಿುಕರಿಗೆ ವೆಬ್​ಸೈಟ್ ವಿಳಾಸ ಹೇಳಿ ಲಾಗಿನ್ ಆಗಿ ಎಂದು ಹೇಳಿ ಹೇಳಿ ಕಳುಹಿಸಲಾಗಿತ್ತು. ಇದರಿಂದ ನಿರಾಶರಾಗಿ ವಾಪಸ್ ತೆರಳಿದ್ದ ಬಹುತೇಕ ಜನರು ಸೋಮವಾರ ಆಗಮಿಸಿ ತಮ್ಮ ಮನವಿಯನ್ನು ವಾಟ್ಸ್​ಆಪ್ ನಂಬರ್​ಗೆ ಸಲ್ಲಿಸಿದ್ದಾರೆ. ವೆಬ್​ಸೈಟ್​ಗಿಂತ ಇದು ಸರಳ ಎಂಬುದು ಅವರ ಗಮನಕ್ಕೆ ಬಂದಂತಿದೆ.

ಸೇವಾ ಸಿಂಧು ವೆಬ್​ಸೈಟ್​ನಲ್ಲಿ ಭಾನುವಾರ ಸಂಜೆಯವರೆಗೆ 914 ವಲಸೆ ಕಾರ್ವಿುಕರಿಂದ ತಾಯ್ನಾಡಿಗೆ ಕಳುಹಿಸುವಂತೆ ಕೋರಿ ಮನವಿ ಬಂದಿವೆ. ಇವು ಹಾಗೂ ವಾಟ್ಸ್​ಆಪ್ ಮೂಲಕ ಬಂದ ಮನವಿಯನ್ನು ಪರಿಶೀಲಿಸಿ ರೈಲು ಅಥವಾ ಬಸ್ಸಿನಲ್ಲಿ ವಲಸೆ ಕಾರ್ವಿುಕರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ.| ಪುರುಷೋತ್ತಮ ಎನ್.ಆರ್. ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ