ಜಿಲ್ಲೆ

ಮಾಹಿತಿ ಕಣಜಕ್ಕೆ ಚಾಲನೆ: ಒಂದೇ ಪೋರ್ಟಲ್​ನಲ್ಲಿ ಇಲಾಖೆ ಸೇವೆಗಳ ವಿವರ

ತುಮಕೂರು: ಸರ್ಕಾರದ ಎಲ್ಲ ಇಲಾಖೆಯ ಸೇವೆಗಳ ಮಾಹಿತಿಯನ್ನು ಒಂದೇ ಪೋರ್ಟಲ್​ನಲ್ಲಿ ಒದಗಿಸುವ ಮಾಹಿತಿ ಕಣಜ ಕಾರ್ಯಕ್ರಮಕ್ಕೆ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ಚಾಲನೆ ನೀಡಲಾಗಿದೆ ಎಂದು ಸಂಸದ ಜಿ.ಎಸ್​.ಬಸವರಾಜು ಹೇಳಿದರು.

ಮಾರಶೆಟ್ಟಿಹಳ್ಳಿ ಗ್ರಾಪಂನಲ್ಲಿ ಗ್ರಾಮಸಭೆ ಹಾಗೂ ಮಾಹಿತಿ ಕಣಜ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಪೋರ್ಟಲ್​ನಲ್ಲಿ ಸುಮಾರು 400 ಇಲಾಖೆಗಳ ಮಾಹಿತಿಯನ್ನು ಒಂದೇ ಸೂರಿನಡಿ ಡಿಜಿಟಲ್​ ಮುಖಾಂತರ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಗ್ರಾಮಮಟ್ಟದ ಮೊದಲ ಮಾಹಿತಿ ಕಣಜ ವಿಶೇಷ ಸಭೆ ಹಾಗೂ ಡಿಜಿಟಲ್​ ಸಂವಾದ ಜಿಲ್ಲೆಯಿಂದ ಆರಂಭವಾಗುತ್ತಿರುವುದು ವಿಶೇಷವೆನಿಸಿದೆ ಎಂದರು.

ದೇಶದಲ್ಲಿ ಡಿಜಿಟಲ್​ ಕ್ರಾಂತಿಯಾಗುತ್ತಿದ್ದು ಮಾಹಿತಿ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಡಿಜಿಟಲ್​ ರೂಪದಲ್ಲಿ ಒಂದೇ ವೇದಿಕೆಯಲ್ಲಿ ವಿವಿಧ ಸೌಲಭ್ಯ, ಸೇವೆಗಳನ್ನು ಒದಗಿಸಲಾಗುತ್ತಿದ್ದು, ಅಗತ್ಯ ಮಾಹಿತಿಯನ್ನು ಕುಳಿತಲ್ಲಿಯೇ ಪಡೆಯಬಹುದು. ಮಾಹಿತಿ ಕಣಜದಲ್ಲಿ ಜನರಿಗೆ ಅಗತ್ಯವಾದ ಮಾಹಿತಿ ನೀಡುವ ಉದ್ದೇಶದಿಂದ ಡಿಜಿಟಲ್​ ಸಂವಾದ ನಡೆಸಲಾಗುತ್ತಿದೆ. ಸಾರ್ವಜನಿಕರು, ಸಂ&ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡು ಅಗತ್ಯವಿರುವ ಮಾಹಿತಿ ಕೇಳಿದರೆ ಡಿಜಿಟಲ್​ ಮಾಹಿತಿ ಕಣಜದಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಯೋಜನೆ ಜಾರಿ ಮಾಡಿದ್ದು, ಇದರ ಮೂಲಕ ಪ್ರತಿಯೊಬ್ಬರೂ ತಮ್ಮ ಮೊಬೈಲ್​ನಲ್ಲಿ ಎಲ್ಲ ರೀತಿಯ ಮಾಹಿತಿ ಪಡೆಯಬಹುದಾಗಿದೆ. ಸುಮಾರು 400 ಇಲಾಖೆಗಳ ಮಾಹಿತಿಯನ್ನು ಕುಳಿತಲ್ಲೇ ಪಡೆಯಬಹುದಾಗಿದೆ. ಹಳ್ಳಿಯಲ್ಲೇ ಕುಳಿತು ನಿಮ್ಮೆಲ್ಲ ಅವಶ್ಯಕತೆ ಹಾಗೂ ಸರ್ಕಾರದ ಯೋಜನೆಗಳ ಹಾಗೂ ವೈಯಕ್ತಿಕ ಮಾಹಿತಿ ಪಡೆಯಲು ಇದು ಸಾಕಷ್ಟು ಅನುಕೂಲವಾಗಿದೆ ಎಂದು ಇ&ಆಡಳಿತ ಯೋಜನಾ ನಿರ್ದೇಶಕ ಎಚ್​.ಎಂ.ಶ್ರೀವ್ಯಾಸ್​ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನೋಡಲ್​ ಅಧಿಕಾರಿ ಅತೀಕ್​ಪಾಷಾ, ಉಪವಿಭಾಗಾಧಿಕಾರಿ ವಿ.ಅಜಯ್​, ತಾಪಂ ಇಒ ನರಸಿಂಹಯ್ಯ, ತಹಸೀಲ್ದಾರ್​ ಬಿ.ಆರತಿ ಮತ್ತಿತರರಿದ್ದರು.