ಜಿಲ್ಲೆ

ಮಾಸ್ಕ್ ಧರಿಸದಿದ್ದರೆ ಜೈಲುಪಾಲು!

ರಾಣೆಬೆನ್ನೂರ : ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 3.0 ಲಾಕ್​ಡೌನ್ ಜಾರಿಗೊಂಡಿದೆ. ಈ ಅವಧಿಯಲ್ಲಿ ಜನತೆ ಮಾಸ್ಕ್ ಧರಿಸದಿದ್ದರೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ಬೀಳುತ್ತೆ. ಇದಕ್ಕೂ ಕೇರ್ ಮಾಡದಿದ್ದರೆ ಕೇಸ್ ಬೀಳುವುದು ಗ್ಯಾರಂಟಿ. ಆದ್ದರಿಂದ ಮನೆಯಿಂದ ಹೊರಗೆ ಬರುವ ಜನತೆ ಹುಷಾರಾಗಿರಬೇಕು.

ಜಿಲ್ಲೆಯಲ್ಲಿ ಕರೊನಾ ವೈರಸ್ ಪ್ರಕರಣ ಪತ್ತೆಯಾದ ಮತ್ತು ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿಯ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸುವ, ಪರಸ್ಪರ ಅಂತರ ಕಾಯ್ದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಸರ್ಕಾರದ ನಿಯಮ ಉಲ್ಲಂಘಿಸಿದರೆ ಮೊದಲಿಗೆ 100 ರೂ. ದಂಡ ಹಾಕುತ್ತಾರೆ. ಅದೇ ವ್ಯಕ್ತಿಗೆ ಮೂರು ಬಾರಿ ದಂಡ ವಿಧಿಸಿದ ನಂತರವೂ ಮತ್ತೆ ಸಿಕ್ಕುಬಿದ್ದರೆ, ಕೋವಿಡ್-19 ಸಾಂಕ್ರಾಮಿಕ ರೋಗದ ಮುಂಜಾಗ್ರತೆ ಕ್ರಮ ಉಲ್ಲಂಘನೆ ಆರೋಪದಡಿ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿ, ಜೈಲಿಗೆ ಅಟ್ಟಲಾಗುತ್ತದೆ.

ಸರ್ಕಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಮುಂದಾಗಿರುವ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಹಾಗೂ ಡಿವೈಎಸ್ಪಿ ಟಿ.ವಿ. ಸುರೇಶ ಅವರು ಬುಧವಾರ ಒಂದೇ ದಿನ ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದ 95 ಜನರಿಗೆ ತಲಾ 100 ರೂ. ದಂಡ ವಿಧಿಸಿದ್ದು, ಒಟ್ಟಾರೆ 9,500 ರೂ. ವಸೂಲಿ ಮಾಡಿದ್ದಾರೆ.

ಬಟ್ಟೆ ಅಂಗಡಿಯಲ್ಲಿಯೇ ಅತಿಹೆಚ್ಚು: ನಗರದ ದೊಡ್ಡಪೇಟೆಯಲ್ಲಿ ಬಹುತೇಕ ಹೋಲ್​ಸೇಲ್ ಬಟ್ಟೆ ಅಂಗಡಿಗಳಿವೆ. ದಾವಣಗೆರೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿರುವ ಕಾರಣ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಅಲ್ಲಿಯ ಜನತೆ ಹೆಚ್ಚಿನ ಪ್ರಮಾಣದಲ್ಲಿ ದೊಡ್ಡಪೇಟೆ ಬಟ್ಟೆ ಅಂಗಡಿಗಳಿಗೆ ಬರುತ್ತಿದ್ದಾರೆ.

ಆದರೆ, ಬಟ್ಟೆ ಅಂಗಡಿಗಳಲ್ಲಿ ಪರಸ್ಪರ ಅಂತರ ಪಾಲನೆಯಾಗುತ್ತಿಲ್ಲ. ಮಾಸ್ಕ್ ಕೂಡ ಸರಿಯಾಗಿ ಯಾರೂ ಧರಿಸುತ್ತಿಲ್ಲ. ಈ ಕುರಿತು ಅಲ್ಲಿಯ ಜನತೆ ಪೊಲೀಸರ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದರಿಂದಾಗಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮ ಉಲ್ಲಂಘನೆ ಆರೋಪದಡಿ ಎಲ್ಲರಿಗೂ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲ, ಮೂರು ಬಾರಿ ದಂಡಕ್ಕೆ ಗುರಿಯಾದರೆ ನಾಲ್ಕನೇ ಬಾರಿಗೆ ದೂರು ದಾಖಲಿಸಿಕೊಂಡು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಯ ಹುಟ್ಟಿಸಿದೆ ದಾವಣಗೆರೆಯವರ ಓಡಾಟ: ದಾವಣಗೆರೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ನಗರದ ಇಬ್ಬರು ವ್ಯಕ್ತಿಗಳನ್ನು ಆರೋಗ್ಯಾಧಿಕಾರಿಗಳು ಬುಧವಾರ ಕರೆದುಕೊಂಡು ಹೋಗಿದ್ದಾರೆ. ಈ ಸುದ್ದಿ ನಗರದಲ್ಲಿ ಹಬ್ಬುತ್ತಿದ್ದಂತೆ ಜನತೆಯಲ್ಲಿ ಢವಢವ ಶುರುವಾಗಿದೆ. ಅಲ್ಲದೆ, ದಾವಣಗೆರೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಜನತೆ ನಗರಕ್ಕೆ ಬರುತ್ತಿದ್ದಾರೆ. ಕೆಂಪು ವಲಯದಿಂದ ಬೇರೆ ಜಿಲ್ಲೆಗೆ ಬರಬೇಕಾದರೆ, ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿಯಿಂದ ಪಾಸ್ ತೆಗೆದುಕೊಳ್ಳುವುದು ಕಡ್ಡಾಯ. ಆದರೂ ದಾವಣಗೆರೆಯಿಂದ ಯಾವುದೇ ಪಾಸ್ ಪಡೆಯದೆ ಜನತೆ ತುಂಗಭದ್ರಾ ನದಿ ದಾಟಿಕೊಂಡು ರಾಣೆಬೆನ್ನೂರಿಗೆ ಬರುತ್ತಿದ್ದಾರೆ. ಇಂಥವರ ಮೇಲೆ ತಾಲೂಕು ಆಡಳಿತ ನಿಗಾ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜನತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಕುರಿತು ಬಹಳಷ್ಟು ಜಾಗೃತಿ ಮೂಡಿಸಿದ್ದೇವೆ; ತಿಳಿ ಹೇಳಿದ್ದೇವೆ. ಆದರೂ ಕೆಲವರು ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಆದ್ದರಿಂದ ಕಾನೂನು ಪ್ರಕಾರ ದಂಡ ಹಾಕುತ್ತಿದ್ದೇವೆ. ಇದಕ್ಕೂ ಕೇಳದಿದ್ದರೆ ಕಾನೂನು ಪ್ರಕಾರ ದೂರು ದಾಖಲಿಸಲಾಗುವುದು. ಜನತೆ ಎಚ್ಚೆತ್ತುಕೊಳ್ಳಬೇಕು. | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ